ಭಾರತೀಯ ದೃಷ್ಟಿಕೋನದಿಂದ ಇತಿಹಾಸ ರಚಿಸಲು ಇದು ಸಕಾಲ: ಅಮಿತ್ ಶಾ

Update: 2023-01-12 06:24 GMT

ಹೊಸದಿಲ್ಲಿ: ಬ್ರಿಟಿಷರು (British) ಭಾರತ ತೊರೆದಿದ್ದು, ಭಾರತೀಯ ದೃಷ್ಟಿಕೋನದಿಂದ ಇತಿಹಾಸ ರಚಿಸಲು ಇದು ಸಕಾಲವಾಗಿದೆ” ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಪ್ರಧಾನಿ ನರೇಂದ್ರ ಮೋದಿ (Narendra Modi) ವಸಾಹತುಶಾಹಿ ಕಾಲದ ಅವಶೇಷಗಳಿಂದ ಮುಕ್ತರಾಗುವ ಉದ್ದೇಶ ಹೊಂದಿದ್ದು, ಇತಿಹಾಸವನ್ನು ಅದರಿಂದ ಮುಕ್ತವಾಗಿಸುವುದು ಬಹು ಮುಖ್ಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

ಸಂಜೀವ್ ಸನ್ಯಾಲ್ ರಚಿಸಿರುವ “Revolutionaries, The other story of how India won its freedom” ಕೃತಿ ಬಿಡುಗಡೆಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

1987ರ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದು ಕರೆಯುವ ಮೂಲಕ ಸಾವರ್ಕರ್ ಮೊದಲ ಬಾರಿಗೆ ಇಂತಹ ಪ್ರಯತ್ನವನ್ನು ಮಾಡಿದ್ದರು. ಭಾರತದ ಸ್ವಾತಂತ್ರ್ಯಕ್ಕೆ ಅಹಿಂಸಾತ್ಮಕ ಹೋರಾಟ ಮಹತ್ವದ ಕೊಡುಗೆ ನೀಡಿದೆ. ಹಾಗೆಂದು ಇನ್ನಿತರ ಬಗೆಯ ಹೋರಾಟಗಳು ಅಂದು ನಡೆದೇ ಇರಲಿಲ್ಲ ಎಂಬ ಈಗಿನ ವ್ಯಾಖ್ಯಾನಗಳು ತಪ್ಪಾಗಿವೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

"ಅಹಿಂಸಾತ್ಮಕ ಹೋರಾಟಗಳಿಗೆ ಸಮಾನಾಂತರವಾಗಿ ಸಶಸ್ತ್ರ ಹೋರಾಟಗಳು ನಡೆಯದೇ ಇದ್ದಿದ್ದರೆ ಸ್ವಾತಂತ್ರ್ಯ ಗಳಿಸಲು ಇನ್ನಷ್ಟು ದಶಕಗಳಾಗುತ್ತಿತ್ತು ಎಂದು ಹೇಳಿದ ಅವರು, ಸ್ವಾತಂತ್ರ್ಯವನ್ನು ಕೃಪೆಯಿಂದ ಪಡೆಯಲಾಗಿಲ್ಲ ಎಂಬುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಿದೆ. ಅದನ್ನು ಲಕ್ಷಾಂತರ ಜನರ ತ್ಯಾಗ ಮತ್ತು ರಕ್ತದ ಹೊಳೆಯಿಂದ ಪಡೆಯಲಾಗಿದೆ. ಕರ್ತವ್ಯಪಥದಲ್ಲಿ ಈಗ ಸ್ಥಾಪಿಸಲಾಗಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ನೋಡಿದಾಗ ನನಗೆ ಸಾಕಷ್ಟು ಸಂತೃಪ್ತಿಯಾಗುತ್ತದೆ" ಎಂದು ಹೇಳಿದ್ದಾರೆ.

ಆದರೆ, ಅಹಿಂಸಾತ್ಮಕ ಹೋರಾಟ ಮತ್ತು ಸಶಸ್ತ್ರ ಹೋರಾಟಗಳೆರಡರ ಬುನಾದಿ 1857ರಲ್ಲಿ ನಡೆದ ದಂಗೆಯಲ್ಲಡಗಿದೆ. ಹೊಸ ತಲೆಮಾರಿನೆದುರು ಅಸಲಿ ಐತಿಹಾಸಿಕ ವಾಸ್ತವಗಳನ್ನಿಡುವುದು ಸರ್ಕಾರ ಮತ್ತು ಇತಿಹಾಸಕಾರಿಬ್ಬರ ಹೊಣೆಗಾರಿಕೆಯೂ ಆಗಿದೆ ಎಂದು ಅಮಿತ್ ಶಾ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಮಂಗಳೂರು | ಗಾಂಜಾ ಮಾರಾಟ ಪ್ರಕರಣ: ವೈದ್ಯ ವಿದ್ಯಾರ್ಥಿ ಸಹಿತ ಮತ್ತೆ ಮೂವರ ಬಂಧನ

Similar News