×
Ad

ಏಕಕಾಲಕ್ಕೆ ಬಿಡುಗಡೆಯಾದ ಖ್ಯಾತ ನಟರ ಚಿತ್ರ: ಅಜಿತ್ ಮತ್ತು ವಿಜಯ್ ಅಭಿಮಾನಿಗಳ ನಡುವೆ ಹೊಡೆದಾಟ

Update: 2023-01-12 13:31 IST

ಮದುರೈ: ತಮಿಳುನಾಡಿನ ಕೊಯಂಬೆಡುನಲ್ಲಿರುವ ರೋಹಿಣಿ ಚಿತ್ರಮಂದಿರದೆದುರು ಕಳೆದ ಮಧ್ಯರಾತ್ರಿ ತಮಿಳು ನಟರಾದ ಅಜಿತ್ ಕುಮಾರ್ (Ajith Kumar) ಮತ್ತು ದಳಪತಿ ವಿಜಯ್ (Thalapathy Vijay) ಅಭಿಮಾನಿಗಳ ನಡುವೆ ಹೊಡೆದಾಟ ನಡೆದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು ಎಂದು ndtv.com ವರದಿ ಮಾಡಿದೆ.

ದಕ್ಷಿಣ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಅಜಿತ್ ಕುಮಾರ್ ನಾಯಕ ನಟರಾಗಿ ಅಭಿನಯಿಸಿರುವ 'ತುನಿವು' (Thunivu) ಮತ್ತು ದಳಪತಿ ವಿಜಯ್ ನಾಯಕತ್ವದ 'ವಾರಿಸು' (Varisu) ಚಿತ್ರಗಳು ಗುರುವಾರ ಏಕಕಾಲಕ್ಕೆ ಬಿಡುಗಡೆಗೊಂಡಿವೆ. ಎಂಟು ವರ್ಷಗಳ ನಂತರ ಈ ಇಬ್ಬರು ಸೂಪರ್‌ಸ್ಟಾರ್‌ಗಳು ನಟಿಸಿರುವ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಗೊಂಡಿವೆ.

ಈ ಸಂದರ್ಭದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಯಾಗಿ, ಉಭಯ ನಟರ ಅಭಿಮಾನಿಗಳು ಪರಸ್ಪರರ ಚಿತ್ರಗಳ ಭಿತ್ತಿಚಿತ್ರಗಳನ್ನು ಹರಿದು, ಚೂರುಚೂರು ಮಾಡಿದರು. ಮೊದಲು ವಿಜಯ್ ಅಭಿಮಾನಿಯೊಬ್ಬ ಅಜಿತ್‌ರ 'ತುನಿವು' ಚಿತ್ರದ ಭಿತ್ತಿಚಿತ್ರವನ್ನು ಹರಿದೆಸೆದರೆ, ನಂತರ ಅಜಿತ್ ಅಭಿಮಾನಿಯೊಬ್ಬ 'ವಾರಿಸು' ಚಿತ್ರದ ಭಿತ್ತಿ ಚಿತ್ರವನ್ನು ಕಿತ್ತೆಸೆದ ಎಂದು ವರದಿಯಾಗಿದೆ.

ಚಿತ್ರಮಂದಿರದ ಹೊರಗೆ ನಡೆದ ಘಟನೆಯ ವಿಡಿಯೊ ವೈರಲ್ ಆಗಿದ್ದು, ಎರಡು ಗುಂಪಿಗೆ ಸೇರಿದ ಅಭಿಮಾನಿಗಳು ಹಲವಾರು ಪ್ರದೇಶಗಳಲ್ಲಿ ಭಿತ್ತಿಫಲಕಗಳಿಗೆ ಹಾನಿ ಮಾಡುತ್ತಿರುವುದು ಅದರಲ್ಲಿ ಕಂಡು ಬಂದಿದೆ. ಉದ್ರಿಕ್ತ ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ 'ತುನಿವು' ಚಿತ್ರದ ಬಿಡುಗಡೆಯಿಂದ ರೋಮಾಂಚಿತನಾಗಿದ್ದ ಭರತ್ ಕುಮಾರ್ ಎಂಬ ಅಜಿತ್ ಅಭಿಮಾನಿಯೊಬ್ಬ ರೋಹಿಣಿ ಚಿತ್ರಮಂದಿರದ ಬಳಿಯ ಪೂನಮಲ್ಲೀ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿಯಿಂದ ಕೆಳಗೆ ಜಿಗಿದಿದ್ದರಿಂದ ಗಾಯಗೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಎಚ್.ವಿನೋದ್ ನಿರ್ದೇಶಿಸಿರುವ 'ತುನಿವು' ಥ್ರಿಲ್ಲರ್ ಸಿನಿಮಾ ಆಗಿದ್ದು, ಅಜಿತ್ ಕುಮಾರ್, ಮಂಜು ವಾರಿಯರ್, ಜಾನ್ ಕೊಕ್ಕೆನ್, ಸಮುತಿರಕಣಿ ಮತ್ತು ಜಿ.ಎಂ.ಸುಂದರ್ ತಾರಾಗಣದಲ್ಲಿದ್ದಾರೆ. ಚಿತ್ರವನ್ನು ಬೋನಿ ಕಪೂರ್ ನಿರ್ಮಿಸಿದ್ದಾರೆ.

ವಿಜಯ್ ನಾಯಕ ನಟರಾಗಿರುವ 'ವಾರಿಸು' ಕೌಟುಂಬಿಕ ಸಿನಿಮಾ ಆಗಿದ್ದು, ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಖುಷ್ಬು, ಪ್ರಭು, ಯೋಗಿ ಬಾಬು ಮತ್ತು ಸಂಗೀತಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರವನ್ನು ವಂಶಿ ಪೈದಿಪಲ್ಲಿ ನಿರ್ದೇಶಿಸಿದ್ದು, ದಿಲ್ ರಾಜು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಸುತ್ತಿಗೆ ಕಾಶ್ಮೀರ್ ಫೈಲ್ಸ್ ಎಂದ ವಿವೇಕ್ ಅಗ್ನಿಹೋತ್ರಿ: ಸತ್ಯಾಂಶ ಏನು?

Similar News