'ತೆಲುಗು ಧ್ವಜ' ಪದ ಬಳಕೆಗೆ ಆಕ್ಷೇಪಿಸಿದ ಗಾಯಕ ಅದ್ನಾನ್‌ ಸಮಿಗೆ ವಿವಿಧತೆಯಲ್ಲಿ ಏಕತೆಯ ಪಾಠ ಮಾಡಿದ ನಟಿ ರಮ್ಯಾ

Update: 2023-01-12 15:02 GMT

ಬೆಂಗಳೂರು: ಎಸ್‌.ಎಸ್‌.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಲನಚಿತ್ರದ ‘ನಾಟು ನಾಟು’ ಗೀತೆಗೆ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಒಲಿದ ಬೆನ್ನಲ್ಲೇ ಆಂಧ್ರ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಮಾಡಿರುವ ಟ್ವೀಟ್‌ ಸಂಚಲನ ಮೂಡಿಸಿದೆ.

ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ʼನಾಟು ನಾಟುʼ ಹಾಡಿಗೆ ಅತ್ಯುತ್ತಮ ಮೂಲಗೀತೆ ವಿಭಾಗದಲ್ಲಿ  ಪ್ರಶಸ್ತಿಗೆ ಪಾತ್ರವಾದ ಬಳಿಕ ಟ್ವೀಟ್‌ ಮಾಡಿದ್ದ ಆಂಧ್ರ ಸಿಎಂ ಜಗನ್‌ ಮೋಹನ ರೆಡ್ಡಿ, ‘ತೆಲುಗು ಬಾವುಟ ಹಾರಾಡುತ್ತಿದೆ. ಆಂಧ್ರ ಜನರ ಪರವಾಗಿ ನಾನು ಕೀರವಾಣಿ, ರಾಜಮೌಳಿ, ಜೂನಿಯರ್‌ ಎನ್‌ಟಿಆರ್‌, ರಾಮಚರಣ್‌ ತೇಜ ಮತ್ತು ಆರ್‌ಆರ್‌ಆರ್‌ ಚಿತ್ರತಂಡವನ್ನು ಅಭಿನಂದಿಸುತ್ತೇನೆ. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ’ ಎಂದು ಬರೆದಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಖ್ಯಾತ ಗಾಯಕ ಅದ್ನಾನ್‌ ಸಮಿ, ‘ತೆಲುಗು ಬಾವುಟ? ನೀವು ಭಾರತದ ಬಾವುಟ ಎಂದು ಉದ್ದೇಶಿಸಿದ್ದೀರ ಅಲ್ಲವೇ? ನಾವು ಮೊದಲು ಭಾರತೀಯರು. ದೇಶದ ಇತರ ಭಾಗದಿಂದ ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದನ್ನು ನಿಲ್ಲಿಸಿ. ಮುಖ್ಯವಾಗಿ, ಅಂತರಾಷ್ಟ್ರೀಯವಾಗಿ (ಗುರುತಿಸಿಕೊಳ್ಳುವಾಗ). ನಾವೆಲ್ಲರೂ ಒಂದೇ ದೇಶದವರು. 1947 ರಲ್ಲಿ ನಾವು ನೋಡಿದಂತೆ ಈ ‘ಪ್ರತ್ಯೇಕತಾವಾದಿ’ ಧೋರಣೆ ಅತ್ಯಂತ ಅನಾರೋಗ್ಯಕರವಾದದ್ದು. ಜೈ ಹಿಂದ್ʼ ಎಂದು ಟ್ವೀಟ್‌ ಮಾಡಿದ್ದರು.

ಅದ್ನಾನ್‌ ಸಮಿ ಟ್ವೀಟ್‌ ದಕ್ಷಿಣ ಭಾರತೀಯರ ಅಸಮಾಧಾನಕ್ಕೆ ಗುರಿಯಾಗಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯ, ಭಾಷೆಗೂ ತನ್ನದೇ ಆದ ಅಸ್ಮಿತೆ ಇರುವ ಬಗ್ಗೆ ಗೌರವ ನೀಡಿ ಎಂದು ನೆಟ್ಟಿಗರು ತಿಳಿ ಹೇಳಿದ್ದಾರೆ.

ಬಹುಭಾಷಾ ನಟಿ ರಮ್ಯಾ (ದಿವ್ಯ ಸ್ಪಂದನ) ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಹೌದು, ನಾವು ಭಾರತೀಯರು. ಅದರೊಂದಿಗೆ ನಾವು ಕನ್ನಡಿಗರು, ತಮಿಳರು, ತೆಲುಗರು, ಬೆಂಗಾಲಿಗಳು...   ನಮ್ಮದೇ ಭಾಷೆಗಳನ್ನು ಹೊಂದಿದಂತೆಯೇ ನಾವೆಲ್ಲರೂ ನಮ್ಮದೇ ‘ಧ್ವಜ’ಗಳನ್ನು ಹೊಂದಿದ್ದೇವೆ. ನಾವು ಭಾರತೀಯರಾಗಿದಕ್ಕೆ ಹೆಮ್ಮೆ ಪಡುತ್ತೇವೆ, ಅಂತೆಯೇ ಮೂಲ ಸಂಸ್ಕೃತಿ, ಭಾಷೆ, ಧ್ವಜಗಳನ್ನು ಹೊಂದಿರುವುದುಕ್ಕಾಗಿ ಹೆಮ್ಮೆ ಪಡುತ್ತೇವೆ. ವಿವಿಧತೆಯಲ್ಲಿ ಏಕತೆ ಎಂಬುದು ನೆನಪಿದೆಯೇ” ಎಂದು ಪ್ರಶ್ನಿಸಿದ್ದಾರೆ.

ನಟಿ ರಮ್ಯಾ ಉತ್ತರಕ್ಕೆ ಹಲವು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಅದ್ನಾನ್‌ ಸಮಿ ಪರವಾಗಿಯೂ ಅಭಿಪ್ರಾಯಗಳು ಕೇಳಿ ಬಂದಿವೆ.

Similar News