ದೇವಾಲಯ ಪ್ರವೇಶಿಸಿದ ದಲಿತ ವ್ಯಕ್ತಿಯನ್ನು ಕಟ್ಟಿಹಾಕಿ ಕೊಳ್ಳಿ ಇಟ್ಟ ಗ್ರಾಮಸ್ಥರು!

Update: 2023-01-13 04:42 GMT

ಡೆಹ್ರಾಡೂನ್: ಉತ್ತರಾಖಂಡದ ಮೊರಿ ಜಿಲ್ಲೆಯ ಸರ್ಲಾ ಎಂಬ ಗ್ರಾಮದಲ್ಲಿ ದಲಿತ ಯುವಕನೊಬ್ಬ ದೇವಾಲಯ ಪ್ರವೇಶಿಸಿದ ಕಾರಣಕ್ಕೆ ಆತನನ್ನು ಕಟ್ಟಿಹಾಕಿ ಥಳಿಸಿದ್ದಲ್ಲದೇ, ರಾತ್ರಿ ಇಡೀ ಸುಡುವ ಕೊಳ್ಳಿಯಿಂದ ಚಿತ್ರಹಿಂಸೆ ನೀಡಿದ್ದಾರೆ ಎಂದು ಆಪಾದಿಸಲಾಗಿದೆ.

ಜನವರಿ 9ರಂದು ಆಯುಷ್ ಎಂಬ ಬೈನೋಲ್ ಗ್ರಾಮದ 22 ವರ್ಷದ ದಲಿತ ಯುವಕ ಚಿತ್ರಹಿಂಸೆಗೆ ಒಳಗಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಯುವಕ ನೀಡಿದ ದೂರಿನ ಪ್ರಕಾರ, ಮೇಲ್ವರ್ಗಕ್ಕೆ ಸೇರಿದ ಕೆಲ ಮಂದಿ ದೇವಸ್ಥಾನದಲ್ಲಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಕಟ್ಟಿಹಾಕಿ ರಾತ್ರಿಇಡೀ ಸುಡುವ ಕೊಳ್ಳಿಯಿಂದ ಚುಚ್ಚಿ ಚಿತ್ರಹಿಂಸೆ ನೀಡಿದ್ದಾರೆ.

ಮರುದಿನ ಆಯುಷ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಹೋಗಿದ್ದು, ಉತ್ತಮ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಲಾಗಿದೆ. ದಲಿತನಾಗಿದ್ದು, ದೇವಾಲಯ ಪ್ರವೇಶಿಸಿದ್ದೇನೆ ಎಂಬ ಕಾರಣಕ್ಕೆ ಕೋಪಗೊಂಡು ಈ ಚಿತ್ರಹಿಂಸೆ ನೀಡಲಾಗಿದೆ ಎಂದು ಯುವಕ ಆಪಾದಿಸಿದ್ದಾರೆ.
ಯುವಕನ ದೂರಿನ ಆಧಾರದಲ್ಲಿ ಐದು ಮಂದಿ ಗ್ರಾಮಸ್ಥರ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉತ್ತರಕಾಶಿ ಎಸ್ಪಿ ಅರ್ಪಣ್ ಯದುವಂಶಿ ಹೇಳಿದ್ದಾರೆ.

Similar News