ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಫುಟ್‌ಬಾಲ್ ಆಟಗಾರ್ತಿಯೀಗ ಫುಡ್ ಡೆಲಿವರಿ ಏಜೆಂಟ್

Update: 2023-01-13 11:57 GMT

ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಫುಟ್‌ಬಾಲ್ ಆಟಗಾರ್ತಿಯೊಬ್ಬಳು ಫುಡ್ ಡೆಲಿವರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಹಲವಾರು ಮಂದಿ ಆಕೆಯ ಕುರಿತು ವಿಚಾರಿಸುತ್ತಿದ್ದು, ಆಕೆ ತನ್ನ ಫುಟ್‌ಬಾಲ್ ಕ್ರೀಡೆಯನ್ನು ಮುಂದುವರಿಸಲು ನೆರವು ನೀಡಲು ಬಯಸಿರುವುದಾಗಿ ಹೇಳಿಕೊಂಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

@SanjuktaChoudh5 ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿರುವ ವಿಡಿಯೊ ಪೊಲನಿ ಅಧಿಕಾರಿ ಎಂಬ ಫುಟ್‌ಬಾಲ್ ಆಟಗಾರ್ತಿಯ ಜೀವನ ದರ್ಶನ ಮಾಡಿಸಿದೆ. ಪಶ್ಚಿಮ ಬಂಗಾಳದ ಪೊಲನಿ ಅಧಿಕಾರಿ 16 ವಯಸ್ಸಿನೊಳಗಿನ ಭಾರತ ಫುಟ್‌ಬಾಲ್‌ ತಂಡವನ್ನು ಪ್ರತಿನಿಧಿಸಿದ್ದರು. ಈಗ ಝೊಮ್ಯಾಟೊ ಫುಡ್ ಡೆಲಿವರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಕೆ, ದಿನಕ್ಕೆ ರೂ. 300-400ರವರೆಗೆ ಗಳಿಸುತ್ತಿದ್ದಾಳೆ. ನಾನು ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾಗ ಬ್ರಿಟನ್, ಜರ್ಮನಿ ಮತ್ತು ಶ್ರೀಲಂಕಾ ದೇಶಗಳಿಗೆ ಪ್ರವಾಸ ಮಾಡಿದ್ದೆ ಎಂದು ಆಕೆ ವಿಡಿಯೊದಲ್ಲಿ ತಿಳಿಸಿದ್ದಾಳೆ.

ಮಗುವಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿರುವ ಪೊಲನಿ ಅಧಿಕಾರಿ, ತನ್ನ ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದಾಳೆ. ಸದ್ಯ ಚಾರುಚಂದ್ರ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪೊಲನಿ ಅಧಿಕಾರಿಗೆ ಓರ್ವ ಹಿರಿಯ ಸಹೋದರಿಯಿದ್ದು, ಆಕೆಗೆ ವಿವಾಹವಾಗಿದೆ.

ಜನವರಿ 10ರಂದು ಹಂಚಿಕೊಳ್ಳಲಾಗಿರುವ ಈ ವಿಡಿಯೊವನ್ನು ಇಲ್ಲಿಯವರೆಗೆ 60,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದರೊಂದಿಗೆ ಹಲವಾರು ಮಂದಿ ವಿಡಿಯೊಗೆ ಪ್ರತಿಕ್ರಿಯಿಸಿದ್ದು, "ಇದನ್ನು ಬೆಳಕಿಗೆ ತಂದಿರುವುದಕ್ಕೆ ಧನ್ಯವಾದಗಳು. ಇಂತಹ ಕ್ರೀಡಾಪಟುಗಳ ಸಮಸ್ಯೆಗಳನ್ನು ರಾಷ್ಟ್ರೀಯ ಮಾಧ್ಯಮಗಳು ಚರ್ಚಿಸಲಿ ಎಂದು ಆಶಿಸೋಣ" ಎಂದು ಓರ್ವ ಟ್ವಿಟರ್ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬ ಬಳಕೆದಾರ, "ಇದು ತುಂಬಾ ದುಃಖಕರ ಸಂಗತಿಯಾಗಿದೆ. ಕ್ರಿಕೆಟ್ ಅಲ್ಲದ ಹಲವಾರು ಕ್ರೀಡೆಗಳ ಇಂತಹ ಪರಿಸ್ಥಿತಿಯನ್ನು ನೋಡಿದ್ದೇನೆ - ಬಾಕ್ಸಿಂಗ್‌ನಿಂದ ಹಿಡಿದು ಹಾಕಿಯವರೆಗೆ, ಇದೀಗ ಫುಟ್‌ಬಾಲ್" ಎಂದು ಹೇಳಿದ್ದರೆ, "ಇಂತಹ ವ್ಯಕ್ತಿಗಳನ್ನು ಘನತೆ ಮತ್ತು ಗೌರವದಿಂದ ನಡೆಸಿಕೊಳ್ಳಬೇಕು ಹಾಗೂ ಅವರಿಗೆ ನೌಕರಿ ಒದಗಿಸಬೇಕು" ಎಂದು ಮೂರನೆಯ ಬಳಕೆದಾರರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಕಳಚಿದ ಮತ್ತೊಂದು ಸಮಾಜವಾದದ ಕೊಂಡಿ: ಶರದ್‌ ಯಾದವ್ ರಾಜಕೀಯ ಹಾದಿ ಹೀಗಿತ್ತು...

Similar News