ಅಧಿಕಾರಿ, ರಾಜಕಾರಣಿ ಇದ್ದರೂ ತನಿಖೆಯಿಂದ ಹೊರಗೆಳೆಯುತ್ತೇವೆ: ಸ್ಯಾಂಟ್ರೋ ರವಿ ಬಂಧನದ ಬಳಿಕ ಗೃಹ ಸಚಿವರ ಪ್ರತಿಕ್ರಿಯೆ

Update: 2023-01-13 12:18 GMT

ಉಡುಪಿ: ಕಳೆದ 11 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸ್ಯಾಂಟ್ರೋ ರವಿ ಬಂಧನವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಖಚಿತಪಡಿಸಿದ್ದಾರೆ. ಪೊಲೀಸರ ವಿಶೇಷ ಪ್ರಯತ್ನದಿಂದ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  4-5 ತಂಡ ರಚಿಸಿ, ಮೈಸೂರು ರಾಮನಗರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿಕೊಂಡು ಆತನನ್ನು ಬೆಂಗಳೂರಿಗೆ ಕರೆ ತರಲಾಗುವುದು. ಸರಕಾರದ ಮೇಲೆ ಎಲ್ಲಾ ರೀತಿಯ ಟೀಕೆಗಳು ಇತ್ತು. ಸರಕಾರ ಮೀನ ಮೇಷ ಎಣಿಸುತ್ತಿದೆ ಹಾಗೂ ಒತ್ತಡ ಇದೆ ಎನ್ನುತ್ತಿದ್ದರು. ಆದರೆ ಸರಕಾರದ ಮೇಲೆ ಯಾವ ಒತ್ತಡವು ಇರಲಿಲ್ಲ. ನಾವು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೆವು. ಎಲ್ಲೇ ಇದ್ದರೂ ಹೇಗೆ ಇದ್ದರೂ ಕರೆತಂದು ವಿಚಾರಿಸಬೇಕೆಂದು ಹೇಳಿದ್ದೆವು ಎಂದರು.

ಯಾವುದೇ ಅಧಿಕಾರಿ, ರಾಜಕಾರಣಿ ಇದ್ದರೂ ಕೂಡ ತನಿಖೆಯಿಂದ ಹೊರಗೆಳೆಯುತ್ತೇವೆ. ಆತನ ಜೊತೆಗೆ ಇರುವವರನ್ನು ಕೂಡ ಬಂಧಿಸಲಾಗುವುದು. ಸದ್ಯ ರವಿ ಬಂಧನವಾಗಿದೆ. ಹೆಚ್ಚಿನ ವಿವರಣೆ ನೀಡಲು ಹೋಗುವುದಿಲ್ಲ. ಪೊಲೀಸರು ಈ ಬಗ್ಗೆ ವಿವರ ನೀಡುತ್ತಾರೆ. ನಿನ್ನೆ ನಾನು ಕೂಡ ಅಹಮದಾಬಾದ್ ನಲ್ಲಿ ಇದ್ದದ್ದು ಕಾಕತಾಳಿಯವಷ್ಟೇ ಎಂದು ಅವರು ಹೇಳಿದರು.

ಆತ ನಡೆಸಿದ ಕೃತ್ಯಕ್ಕೆ ಸರಿಯಾದ ಶಿಕ್ಷೆಯಾಗಬೇಕು. ಗುಜರಾತ್‌ನಲ್ಲಿ ಆತನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ. ನಂತರ ಆತನನ್ನು ಕರೆ ತರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಇಂದು ಸಂಜೆ ಅಥವಾ ನಾಳೆ ಆತನನ್ನು ಬೆಂಗಳೂರಿಗೆ ಕರೆದಿರುವ ಸಾಧ್ಯತೆ ಇದೆ. ಎರಡು ಮೂರು ಕಡೆ ಅಂತಿಮ ಕ್ಷಣದಲ್ಲಿ ಆತ ತಪ್ಪಿಸಿಕೊಂಡಿದ್ದನು. ಎಲ್ಲಾ ಆಯಮದಲ್ಲೂ ತನಿಖೆ ನಡೆಯುತ್ತದೆ. ಏನೇ ಇದ್ದರೂ ಅಡಗಿಸಿರುವುದಿಲ್ಲ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಯುತ್ತದೆ. ಆತ ನಡೆಸಿದ ಎಲ್ಲ ಕೃತ್ಯಕ್ಕೆ ಶಿಕ್ಷೆಯಾಗುತ್ತದೆ ಎಂದು ಅವರು ತಿಳಿಸಿದರು.

Similar News