×
Ad

ಭಾರತದ ಸ್ಟಾರ್ಟಪ್ ಫಂಡಿಂಗ್ ನಲ್ಲಿ ಶೇ.33ರಷ್ಟು ಕುಸಿತ: ಪಿಡಬ್ಲ್ಯುಸಿ ಇಂಡಿಯಾ ವರದಿ

Update: 2023-01-13 21:12 IST

ಹೊಸದಿಲ್ಲಿ,ಜ.13: ಭಾರತೀಯ ನವೋದ್ಯಮ (ಸ್ಟಾರ್ಟಪ್)ಗಳು 2022ರಲ್ಲಿ ಸುಮಾರು 24 ಶತಕೋಟಿ ಡಾಲರ್ನಷ್ಟು ಹಣವನ್ನು ಸ್ವೀಕರಿಸಿದ್ದು, ಇದು 2021ರಲ್ಲಿ ಅವು ಸಂಗ್ರಹಿಸಿದ್ದ ಹಣಕ್ಕಿಂತ ಶೇ.33ರಷ್ಟು ಕಡಿಮೆಯೆಂದು ಜನವರಿ 11ರಂದು ಪ್ರಕಟವಾದ ವರದಿಯೊಂದು ತಿಳಿಸಿದೆ. ಕಳೆದ ವರ್ಷ ಭಾರತದ ಸ್ಟಾರ್ಟಪ್ ಗಳು ಒಟ್ಟು 37 ಶತಕೋಟಿ ಡಾಲರ್ ಹಣವನ್ನು ಹೂಡಿಕೆ ಮಾಡಿದ್ದವು ಎಂದು ವಿತ್ತೀಯ ನಿರ್ವಹಣಾ ಸಂಸ್ಥೆ ‘ಪಿಡಬ್ಲ್ಯುಸಿ ಇಂಡಿಯಾ ’ದ ವರದಿ ತಿಳಿಸಿದೆ.

ಸ್ಟಾರ್ಟ್ಅಪ್ ಟ್ರಾಕರ್- 2022 ಎಂಬ ಶೀರ್ಷಿಕೆಯ ಈ ವರದಿಯು ಆದರೂ 2020 ಹಾಗೂ 2019ಕ್ಕಿಂತ ಎರಡು ಪಟ್ಟು ಅಧಿಕ ಹಣ 2022ರಲ್ಲಿ ಸ್ಟಾರ್ಟಪ್ ಗಳಿಗೆ ಹರಿದುಬಂದಿರುವುದಾಗಿ ವರದಿ ತಿಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತದ ಭೀತಿ, ಬಡ್ಜಿದರ ಏರಿಕೆ ಪ್ರಮಾಣದಲ್ಲಿ ಕುಸಿತ ಮತ್ತಿತರ ಕಾರಣಗಳಿಗಾಗಿ ಹೂಡಿಕೆದಾರರು ಅತೀವ ಎಚ್ಚರಿಕೆಯ ನಡೆ ಅನುಸರಿಸಿದ್ದರು. ಇದರಿಂದಾಗಿ ಸ್ಟಾರ್ಟ್ಅಪ್ ಫಂಡಿಂಗ್ ನಲ್ಲಿ ನಿರಂತರವಾದ ಕುಸಿತವುಂಟಾಗಿದೆ.

ಸ್ಟಾರ್ಟಪ್ ಗಳಿಗೆ ಹೂಡಿಕೆಯಾಗಿರುವ ಒಟ್ಟು ಫಂಡಿಂಗ್ ನಲ್ಲಿ ಸಾಫ್ಟ್ವೇರ್ ಸೇವಾವಲಯದ ಪಾಲು ಶೇ.25ರಷ್ಟಾಗಿದೆ. 2021ಕ್ಕೆ ಹೋಲಿಸಿದರೆ 2022ರಲ್ಲಿ ಈ ವಲಯದ ಫಂಡಿಂಗ್ ಮೌಲ್ಯದಲ್ಲಿ ಶೇ.20ರಷ್ಟು ಹೆಚ್ಚಳವಾಗಿದೆ.

2022ರಲ್ಲಿ ಕನಿಷ್ಠ 21 ಸ್ಟಾರ್ಟ್ಅಪ್ ಗಳು ಯೂನಿಕಾರ್ನ್ ಕ್ಲಬ್ ಪ್ರವೇಶಿಸಿವೆ. ಇವುಗಳಲ್ಲಿ ಸಾಫ್ಟವೇರ್ ಸೇವಾ ಕ್ಷೇತ್ರಗಳು ಗರಿಷ್ಠ ಪಾಲು ಪಡೆದಿವೆ. ಬ್ಯಾಂಕಿಂಗ್ ಹಾಗೂ ಇತರ ಹಣಕಾಸು ಕ್ಷೇತ್ರಗಳಿಗೆ ಪೂರಕವಾದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಹಾಗೂ ತಂತ್ರಜ್ಞಾನದ ನವೋದ್ಯಮಗಳು ಆನಂತರದ ಸ್ಥಾನದಲ್ಲಿವೆ. 100 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದಿರುವ ಸ್ಟಾರ್ಟಪ್ ಗಳನ್ನು ಯೂನಿಕಾರ್ನ್ ಗಳೆಂದು ಕರೆಯಲಾಗುತ್ತದೆ. ಆದರೂ, 2021ರಲ್ಲಿ 42 ಸ್ಟಾರ್ಟಪ್ಗಳು ಯೂನಿಕಾರ್ನ್ ಕ್ಲಬ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದವು.

2022ರಲ್ಲಿ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರ ಸ್ಟಾರ್ಟಪ್ ಗಳಲ್ಲಿಯೂ ಫಂಡಿಂಗ್ ಚಟುವಟಿಕೆಗಳಲ್ಲಿ ಏರಿಕೆ ಕಂಡುಬಂದಿದೆ.

2021 ವರ್ಷಕ್ಕೆ ಹೋಲಿಸಿದರೆ 2022ರಲ್ಲಿ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಸ್ಟಾರ್ಟ್ಅಪ್ ಫಂಡಿಂಗ್ ಚಟುವಟಿಕೆಯಲ್ಲಿ ಶೇ.6ರಷ್ಟು ಹೆಚ್ಚಳವಾಗಿದೆ.2022ರಲ್ಲಿ ಸುದ್ದಿ, ಮನರಂಜನೆ ಮತ್ತಿತರ ಮಾಹಿತಿಗಳನ್ನು ಒದಗಿಸುವ ಆ್ಯಪ್ ಡೈಲಿಹಂಟ್ 890 ದಶಲಕ್ಷ ಡಾಲರ್ ಹಣವನ್ನು ಸಂಗ್ರಹಿಸಿದ್ದು, ಈ ಕ್ಷೇತ್ರದ ಒಟ್ಟು ಫಂಡಿಂಗ್ ನಲ್ಲಿ ಶೇ.55ರಷ್ಟು ಪಾಲು ಪಡೆದಿದೆ ಎಂದು ವರದಿ ತಿಳಿಸಿದೆ.

ಭಾರತದ ಇನ್ನೊಂದು ಪ್ರತಿಷ್ಠಿತ ಸ್ಟಾರ್ಟ್ಅಪ್ ಸಂಸ್ಥೆಯಾದ ಬೈಜೂಸ್, ಈ ವರ್ಷ ಸಾರ್ವಜನಿಕವಾಗಿ ಶೇರುಗಳನ್ನು ಸಂಗ್ರಹಿಸುವ ತನ್ನ ಯೋಜನೆಯನ್ನು ಮುಂದೂಡಿದೆ. ಲೆಕ್ಕಪತ್ರದಲ್ಲಿ ಅಕ್ರಮಗಳನ್ನು ಕಂಡುಬಂದ ಹಿನ್ನೆಲೆಯಲ್ಲಿ ಈ ಕಂಪೆನಿಯು ತೆರಿಗೆ ಇಲಾಖೆಯಿಂದ ತರಾಟೆಗೊಳಗಾಗಿತ್ತು. ಇನ್ನೊಂದು ಖ್ಯಾತ ಸ್ಟಾರ್ಟ್ಅಪ್ ಸಂಸ್ಥೆಯ ಮೌಲ್ಯವು 10 ಶತಕೋಟಿ ಡಾಲರ್ ನಿಂದ 2.7 ಶತಕೋಟಿ ಡಾಲರ್ ಗೆ ಕುಸಿದಿದೆ.

ಭಾರತದ ಒಟ್ಟು ಸ್ಟಾರ್ಟ್ ಅಪ್‌ಗಳ ಪೈಕಿ ಶೇ.82ರಷ್ಟು ಬೆಂಗಳೂರು, ದಿಲ್ಲಿ-ಎನ್ಸಿಆರ್ ಹಾಗೂ ಮುಂಬೈ ಮಹಾನಗರಗಳನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿವೆ ಎಂದು ವರದಿ ತಿಳಿಸಿದೆ.

Similar News