ಹಣ ನೀಡುವವರ ನಿರ್ದೇಶನದಂತೆ ಟಿವಿ ಚಾನೆಲ್‌ಗಳು ಸಮಾಜವನ್ನು ವಿಭಜಿಸುತ್ತಿದೆ: ಸುಪ್ರೀಂಕೋರ್ಟ್‌

ದ್ವೇಷ ಭಾಷಣವನ್ನು ಉತ್ತೇಜಿಸುವ ಸುದ್ದಿ ನಿರೂಪಕರನ್ನು ಶಿಕ್ಷಿಸಬೇಕು ಎಂದ ನ್ಯಾಯಾಲಯ

Update: 2023-01-13 16:29 GMT

ಹೊಸದಿಲ್ಲಿ: ಭಾರತದಲ್ಲಿ ಟೆಲಿವಿಷನ್ ಚಾನೆಲ್‌ಗಳು ಸಮಾಜವನ್ನು ವಿಭಜಿಸುತ್ತಿವೆ ಮತ್ತು ಸುದ್ದಿಗಳನ್ನು ಸಂವೇದನಾಶೀಲಗೊಳಿಸುವ ಅಜೆಂಡಾದಿಂದ ನಡೆಸಲ್ಪಡುತ್ತಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದ್ದಾಗಿ barandbench.com ವರದಿ ಮಾಡಿದೆ.

ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಬಿವಿ ನಾಗರತ್ನ ಅವರ ಪೀಠವು‌, ಚಾನೆಲ್‌ಗಳಿಗೆ ಹಣ ನೀಡುವವರು ಏನು ಪ್ರಸಾರ ಮಾಡಬೇಕೆಂದು ನಿರ್ದೇಶಿಸುತ್ತಾರೆ ಎಂದು ಹೇಳಿದರು.

"ಎಲ್ಲವೂ TRP [ಟೆಲಿವಿಷನ್ ರೇಟಿಂಗ್ ಪಾಯಿಂಟ್] ನಿಂದ ನಡೆಸಲ್ಪಡುತ್ತದೆ" ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು. "ಅವರು ವಿಚಾರಗಳನ್ನು ಸಂವೇದನಾಶೀಲಗೊಳಿಸುತ್ತಾರೆ, ತಮಗೆ ನೀಡಿದ ಕಾರ್ಯಸೂಚಿಯನ್ನು ಪೂರೈಸುತ್ತಾರೆ. ದೃಶ್ಯ ಮಾಧ್ಯಮವು ಪತ್ರಿಕೆಗಿಂತ ಹೆಚ್ಚು ಜನರ ಮೇಲೆ ಪ್ರಭಾವ ಬೀರುತ್ತದೆ" ಎಂದು ಅವರು ಹೇಳಿದರು.

ದ್ವೇಷದ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸುತ್ತಿದೆ. ಸೆಪ್ಟೆಂಬರ್‌ನಲ್ಲಿ, ಟೆಲಿವಿಷನ್ ಸುದ್ದಿ ವಾಹಿನಿಗಳು ದ್ವೇಷದ ಭಾಷಣಕ್ಕೆ ಅವಕಾಶ ನೀಡುತ್ತಾ ಯಾವುದೇ ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುವುದನ್ನು ನ್ಯಾಯಾಲಯ ಗಮನಿಸಿತ್ತು. ಶುಕ್ರವಾರದ ವಿಚಾರಣೆಯಲ್ಲಿ, ದ್ವೇಷದ ಭಾಷಣವನ್ನು ಉತ್ತೇಜಿಸುವ ಅಥವಾ ತೊಡಗಿಸಿಕೊಳ್ಳುವ ಸುದ್ದಿ ನಿರೂಪಕರನ್ನು ಶಿಕ್ಷಿಸಬೇಕು ಎಂದು ನ್ಯಾಯಾಲಯ ಹೇಳಿದ್ದಾಗಿ ವರದಿ ಉಲ್ಲೇಖಿಸಿದೆ.

"ನಿರೂಪಕರ ಮೇಲೆ ದಂಡ ವಿಧಿಸಿದರೆ ಈ ದ್ವೇಷದ ಮಾತುಗಳಿಗೂ ಬೆಲೆ ತೆರಬೇಕಾಗುತ್ತದೆ ಎಂದು ಅವರು ತಿಳಿಯುತ್ತಾರೆ" ಎಂದು ನ್ಯಾಯಾಲಯ ಹೇಳಿದೆ. ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್‌ನ ಕಾರ್ಯವೈಖರಿಯನ್ನು ಟೀಕಿಸಿದ ಪೀಠ, ನಿಯಂತ್ರಕನಾಗಿ ಇದು ಏನನ್ನೂ ಮಾಡುತ್ತಿಲ್ಲ ಎಂದು ಹೇಳಿದೆ.

"NBSA ಪಕ್ಷಪಾತ ಮಾಡಬಾರದು" ಎಂದು ನ್ಯಾಯಮೂರ್ತಿ ಜೋಸೆಫ್ ಹೇಳಿದರು. “ನೀವು ಎಷ್ಟು ಬಾರಿ ಆಂಕರ್‌ಗಳನ್ನು ವಜಾಗೊಳಿಸಿದ್ದೀರಿ? ಚಾನೆಲ್‌ಗಳು ಜನರನ್ನು ಸಮಾನವಾಗಿ ಮಾತನಾಡಲು ಬಿಡುವುದಿಲ್ಲ. ಅವರಿಗಿಷ್ಟವಿಲ್ಲದ ಜನರನ್ನು ಮ್ಯೂಟ್ ಮಾಡಲಾಗುತ್ತದೆ. ಇದನ್ನು ಇತರರು ಪ್ರಶ್ನಿಸದೆ ಹೋಗುತ್ತಿದ್ದಾರೆ” ಎಂದು ಹೇಳಿದರು.

ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಪರವಾಗಿ ಹಾಜರಾದ ವಕೀಲ ಅರವಿಂದ್ ದಾತಾರ್, ಹಲವಾರು ಉಲ್ಲಂಘನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಆದರೆ ಸುದರ್ಶನ್ ಟಿವಿ ಮತ್ತು ರಿಪಬ್ಲಿಕ್ ಟಿವಿಯಂತಹ ದೂರದರ್ಶನ ಚಾನೆಲ್‌ಗಳು ಅದರ ವ್ಯಾಪ್ತಿಯೊಳಗೆ ಬರುವುದಿಲ್ಲ ಎಂದು ಹೇಳಿದರು.

2020 ರಲ್ಲಿ ಸುದರ್ಶನ್ ನ್ಯೂಸ್‌ನಲ್ಲಿ ಪ್ರಸಾರವಾದ "UPSC ಜಿಹಾದ್" ಎಂಬ ಕಾರ್ಯಕ್ರಮಕ್ಕೆ ಸಂಬಂಧಿಸಿದ ಒಂದು ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ವಿದೇಶಿ ಮೂಲದ ಭಯೋತ್ಪಾದಕ ನಿಧಿಯನ್ನು ಬಳಸಿಕೊಂಡು ಮುಸ್ಲಿಮರು ನಾಗರಿಕ ಸೇವೆಗಳಿಗೆ "ನುಸುಳುತ್ತಿದ್ದಾರೆ" ಎಂದು ಚಾನೆಲ್ ಹೇಳಿಕೊಂಡಿತ್ತು

Similar News