ದಿಲ್ಲಿ: ಕಾರಿನಡಿ ಮೃತದೇಹ ಎಳೆದೊಯ್ದ ಪ್ರಕರಣ: 11 ಪೊಲೀಸ್ ಸಿಬ್ಬಂದಿ ಅಮಾನತು
ಹೊಸದಿಲ್ಲಿ, ಜ. 13: ಕಾರಿನಡಿ ಸಿಲುಕಿದ್ದ ಯುವತಿಯ ಮೃತದೇಹವನ್ನು ಎಳೆದೊಯ್ದು ಘಟನೆ ನಡೆದ ಸಂದರ್ಭ ಮೂರು ಪಿಸಿಆರ್ ವ್ಯಾನ್(PCR Van) ಗಳು ಹಾಗೂ ಎರಡು ಕಾವಲು ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ ಎಲ್ಲ 11 ಮಂದಿ ಸಿಬ್ಬಂದಿಯನ್ನು ದಿಲ್ಲಿ ಪೊಲೀಸ್ ಇಲಾಖೆ ಅಮಾನತು ಮಾಡಿದೆ. ಎಲ್ಲರೂ ರೋಹಿಣಿ ಜಿಲ್ಲಾ ಪೊಲೀಸ್(Rohini District Police) ಗೆ ಸೇರಿದವರು. ಈ ಆಘಾತಕಾರಿ ದುರ್ಘಟನೆ ನಡೆಯುವ ಸಂದರ್ಭ ಅವರು ಹೊರ ಭಾಗದ ದಿಲ್ಲಿಯ ಕಂಝವಾಲಾ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು.
ಅಮಾನತುಗೊಂಡವರಲ್ಲಿ ಇಬ್ಬರು ಸಬ್-ಇನ್‌ಸ್ಪೆಕ್ಟರ್‌ಗಳು, ನಾಲ್ವರು ಸಹಾಯಕ ಸಬ್-ಇನ್‌ಸ್ಪೆಕ್ಟರ್‌ಗಳು, ನಾಲ್ವರು ಹೆಡ್ ಕಾನ್ಸ್ಟೇಬಲ್ ಹಾಗೂ ಓರ್ವ ಕಾನ್ಸ್ಟೆಬಲ್ ಸೇರಿದ್ದಾರೆ. ಆರು ಮಂದಿಯನ್ನು ಪಿಸಿಆರ್ ಕರ್ತವ್ಯಕ್ಕೆ ಹಾಗೂ ಐವರನ್ನು ಕಾವಲು ಠಾಣೆಗೆ ನಿಯೋಜಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆಗ ಘಟನಾ ಸ್ಥಳದ ವ್ಯಾಪ್ತಿಯಲ್ಲಿದ್ದ ಪಿಸಿಆರ್ ವ್ಯಾನ್ ಗಳು ಹಾಗೂ ಕಾವಲು ಠಾಣೆಯಲ್ಲಿದ್ದವರನ್ನು ಕರ್ತವ್ಯ ಲೋಪದ ಆರೋಪದ ಮೇಲೆ ಕೂಡಲೇ ಅಮಾನತುಗೊಳಿಸುವಂತೆ ಹಾಗೂ ಪ್ರಥಮ ಮಾಹಿತಿ ವರದಿಯಲ್ಲಿ ಹತ್ಯೆ ಆರೋಪವನ್ನು ಸೇರಿಸುವಂತೆ ಕೇಂದ್ರ ಸಚಿವಾಲಯ ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರಿಗೆ ಸೂಚನೆ ನೀಡಿತ್ತು.
ಘಟನೆಯ ಬಗ್ಗೆ ದಿಲ್ಲಿ ಪೊಲೀಸ್ ನ ವಿಶೇಷ ಆಯುಕ್ತರಾದ ಶಾಲಿನಿ ಸಿಂಗ್ ತನಿಖೆ ನಡೆಸಿದಾಗ ಪೊಲೀಸ್ ಸಿಬ್ಬಂದಿ ತಪ್ಪೆಸಗಿರುವುದು ಕಂಡು ಬಂತು. ದಿಲ್ಲಿಯ ಹೊರಭಾಗದ ಸುಲ್ತಾನ್ಪುರಿಯಲ್ಲಿ ಜನವರಿ 1ರಂದು ಮುಂಜಾನೆ ಅಂಜಲಿ ಸಿಂಗ್ (20) ಎಂಬ ಯುವತಿ ಚಾಲನೆ ಮಾಡುತ್ತಿದ್ದ ಸ್ಕೂಟಿಗೆ ಕಾರು ಢಿಕ್ಕಿ ಹೊಡೆದಿತ್ತು. ಕಾರಿನ ಅಡಿ ಯುವತಿ ಸಿಲುಕಿರುವುದು ಗೊತ್ತಿದ್ದರೂ ಆರೋಪಿಗಳು ಕಾರು ನಿಲ್ಲಿಸಿದ 12 ಕಿ.ಮೀ. ವರೆಗೆ ಸಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.