ಕಳಚಿದ ಸಮಾಜವಾದದ ಕೊಂಡಿ ಶರದ್ ಯಾದವ್

Update: 2023-01-13 18:31 GMT

ಸಮಾಜವಾದದ ಮತ್ತೊಂದು ಕೊಂಡಿ ಕಳಚಿದೆ. ಕೇಂದ್ರದ ಮಾಜಿ ಸಚಿವ, ಆರ್‌ಜೆಡಿ ಹಿರಿಯ ನಾಯಕ ಶರದ್ ಯಾದವ್ ನಿಧನರಾಗಿದ್ದಾರೆ. ನಾಲ್ಕು ದಶಕಗಳ ಅವರ ರಾಜಕೀಯ ಅಂತ್ಯ ಕಂಡಿದೆ.

ಕೃಷಿಕ ಕುಟುಂಬದ ಹಿನ್ನೆಲೆ. ವಿದ್ಯಾರ್ಥಿ ಬದುಕಿನಲ್ಲಿಯೇ ರಾಜಕೀಯದೆಡೆಗೆ ಒಲವು. ಪೂರಕವಾಗಿ ಸಮಾಜವಾದಿ ಚಿಂತಕ ರಾಮಮನೋಹರ ಲೋಹಿಯಾ ಅವರ ಪ್ರಭಾವ. ಶರದ್ ಯಾದವ್ ಒಬ್ಬನಾಯಕರಾಗಿ ರೂಪುಗೊಂಡಿದ್ದು ಹೋರಾಟದ ದಾರಿಯಲ್ಲಿ.

1947ರಲ್ಲಿ ಮಧ್ಯಪ್ರದೇಶದ ಹೋಶಂಗಾಬಾದ್‌ನ ಹಳ್ಳಿಯಲ್ಲಿ ಜನಿಸಿದ ಶರದ್ ಯಾದವ್, 1971ರಲ್ಲಿ ಇಂಜಿನಿಯರಿಂಗ್ ಅಧ್ಯಯನ ಪೂರ್ಣಗೊಳಿಸಿದರು. ಸಕ್ರಿಯ ಯುವ ನಾಯಕರಾಗಿ ಅವರು ಅನೇಕ ಚಳವಳಿಗಳಲ್ಲಿ ಭಾಗವಹಿಸಿದರು. ಸಕ್ರಿಯ ರಾಜಕಾರಣಕ್ಕೆ ಅವರ ಪ್ರವೇಶವಾದದ್ದು 1974ರಲ್ಲಿ. ಮೊದಲು ಮಧ್ಯಪ್ರದೇಶದ ಜಬಲ್‌ಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಅದು ಜೆಪಿ ಚಳವಳಿಯ ಸಮಯ ಮತ್ತು ಜೆಪಿ ಅವರು ಹಲ್ದಾರ್ ಕಿಸಾನ್ ಆಗಿ ಆಯ್ಕೆ ಮಾಡಿದ ಮೊದಲ ಅಭ್ಯರ್ಥಿಯಾಗಿದ್ದರು.

1979ರಲ್ಲಿ ಜನತಾ ದಳ ಇಬ್ಭಾಗವಾದಾಗ ಚರಣ್ ಸಿಂಗ್ ಬಣದ ಜತೆಗೆ ಗುರುತಿಸಿಕೊಂಡರು. 1981ರಲ್ಲಿ ಅಮೇಠಿ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ವಿರುದ್ಧ ಸೋಲು ಕಂಡರು. 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದಲ್ಲಿ ಕೇಂದ್ರದಲ್ಲಿ ರಚನೆಯಾದ ಮೊದಲ ಮೈತ್ರಿ ಸರಕಾರದ ಭಾಗವಾಗಿದ್ದರು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರಕಾರದಲ್ಲಿ 1999ರಿಂದ 2004ರವರೆಗೆ ವಿವಿಧ ಖಾತೆಗಳನ್ನು ನಿರ್ವಹಿಸಿದ್ದ ಶರದ್, 2003ರಲ್ಲಿ ನಿತೀಶ್ ಕುಮಾರ್ ಅವರನ್ನು ಒಳಗೊಂಡಿರುವ ಜನತಾ ದಳ ಯುನೈಟೆಡ್ (ಜೆಡಿಯು) ನ ಅಧ್ಯಕ್ಷರಾದರು. 2003 ರಿಂದ 2016ರವರೆಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ.

2004ರ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ನಿತೀಶ್ ಕುಮಾರ್ ಅವರಿಗೆ ರಾಜ್ಯಸಭಾ ಸ್ಥಾನ ಪಡೆಯಲು ನೆರವಾದರು. 2009ರಲ್ಲಿ, ಶರದ್ ಯಾದವ್ ಮತ್ತೆ ಮಾದೇಪುರದಿಂದ ಲೋಕಸಭೆಗೆ ಆಯ್ಕೆಯಾದರು. ಲೋಕಸಭೆಗೆ ಏಳು ಬಾರಿ ಹಾಗೂ ರಾಜ್ಯಸಭೆಗೆ ಮೂರು ಬಾರಿ ಜೆಡಿಯು ಮೂಲಕ ಆಯ್ಕೆಯಾಗಿದ್ದರು. ಮಧ್ಯ ಪ್ರದೇಶ (ಜಬಲ್ಪುರ್), ಬಿಹಾರ (ಮಾದೇಪುರ) ಹಾಗೂ ಉತ್ತರ ಪ್ರದೇಶ (ಬದಾಂಯು) ಹೀಗೆ ಮೂರು ರಾಜ್ಯಗಳಿಂದ ಸ್ಪರ್ಧಿಸಿದ್ದ ಹೆಚ್ಚುಗಾರಿಕೆ ಅವರದು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಯು ಸೋಲಿನ ನಂತರ, ನಿತೀಶ್ ಕುಮಾರ್ ಅವರೊಂದಿಗಿನ ಯಾದವ್ ಅವರ ಸಂಬಂಧ ಹದಗೆಟ್ಟಿತು. ನಿತೀಶ್ ಕುಮಾರ್ ಅವರು ಮಹಾಮೈತ್ರಿಕೂಟದ ಜೊತೆಗೆ ಮೈತ್ರಿ ಮುರಿದು ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ಪಕ್ಷವನ್ನು ತ್ಯಜಿಸಿದರು.

2018ರಿಂದ ರಾಜಕೀಯದಲ್ಲಿ ಅವರ ಮತ್ತೊಂದು ಇನಿಂಗ್ಸ್ ಶುರುವಾಯಿತು. ತಮ್ಮ ಸ್ವಂತ ಪಕ್ಷವಾದ ಲೋಕತಾಂತ್ರಿಕ ಜನತಾ ದಳವನ್ನು ಪ್ರಾರಂಭಿಸಿದರು, ಆದರೆ ಎರಡು ವರ್ಷಗಳ ನಂತರ ಅಂದರೆ 2020ರ ಮಾರ್ಚ್‌ನಲ್ಲಿ ಅದನ್ನು ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳದೊಂದಿಗೆ ವಿಲೀನಗೊಳಿಸಿದರು. ವಿರೋಧ ಪಕ್ಷಗಳ ಒಕ್ಕೂಟದ ಮೊದಲ ಹೆಜ್ಜೆ ಎಂದು ಆ ಬೆಳವಣಿಗೆಯನ್ನು ಅವರು ಬಣ್ಣಿಸಿದ್ದರು. ದೇಶದ ರಾಜಕಾರಣದಲ್ಲಿ ಸಮಾಜವಾದಿ ಹಿನ್ನೆಲೆಯ ನಾಯಕರೆಲ್ಲ ಮರೆಯಾಗುತ್ತಿದ್ದಾರೆ. ಆ ಸಾಲಿನ ಮತ್ತೊಬ್ಬ ಹಿರಿಯ ನಾಯಕ ಈಗ ಇನ್ನಿಲ್ಲ.

Similar News