850 ಎಕರೆ ಪ್ರದೇಶದಲ್ಲಿ ಎಂಆರ್‌ಪಿಎಲ್ 4ನೇ ಹಂತದ ವಿಸ್ತರಣೆ ಯೋಜನೆ: ವೆಂಕಟೇಶ್

Update: 2023-01-13 18:57 GMT

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) 4ನೇ ಹಂತದ ವಿಸ್ತರಣೆ ಯೋಜನೆಯು ಕುತ್ತೆತ್ತೂರು, ಪೆರ್ಮುದೆ ಸೇರಿದಂತೆ ಸುಮಾರು 850 ಎಕರೆ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾಹಿತಿ ನೀಡಿದ ಅವರು, ಮೂಳೂರು ಮತ್ತು ಕಂದಾವರ ಗ್ರಾಮದ 120 ಎಕರೆ ಪ್ರದೇಶದಲ್ಲಿ ಪುನರ್ವಸತಿ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆದ ಬಳಿಕ ಯೋಜನೆ ಅನುಷ್ಠಾನಗೊಳ್ಳಲಿದೆ. ಈ ಪ್ರದೇಶದ ಭೂ ಮಾಲಕರು ನ್ಯಾಯಾಲಯದಲ್ಲಿ ಭೂಸ್ವಾಧೀನದ ವಿರುದ್ಧ ದಾವೆ ಹೂಡಿರುವ ಹಿನ್ನೆಲೆಯಲ್ಲಿ ಪ್ರಕ್ರಿಯೆ ಒಂದಿಷ್ಟು ವಿಳಂಬವಾಗಿದೆ ಎಂದು ಹೇಳಿದರು.

ಹಾಲಿ ಎಂಆರ್‌ಪಿಎಲ್ 1,600 ಎಕರೆ ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಈ ಪೈಕಿ ಶೇ.33ನ್ನು ಹಸಿರು ಪರಿಸರಕ್ಕಾಗಿ ಮೀಸಲಿರಿಸಲಾಗಿದೆ. 1,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಸ್ಥಾವರಗಳನ್ನು ಹೊಂದಿದೆ. 80 ಎಕರೆ ಟೌನ್‌ಶಿಪ್‌ಗೆ ಬಳಕೆಯಾಗಿದೆ. ಎಂಆರ್ ಪಿಎಲ್ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ಮಾಲಿನ್ಯ ನಿಯಂತ್ರಣ ಕಡಿತಗೊಳಿಸುವ ನಿಟ್ಟಿನಲ್ಲಿ ಶೇ.10ರ ಪ್ರಮಾಣದಲ್ಲಿ ಎಥೆನಾಲ್ ಉತ್ಪಾದಿಸುತ್ತಿದೆ. ಹರಿಹರ, ದಾವಣಗೆರೆಯಲ್ಲಿ ದಿನಕ್ಕೆ 60 ಸಾವಿರ ಲೀಟರ್ ಎಥೆನಾಲ್ ಉತ್ಪಾದಿಸುವ ಘಟಕವನ್ನು ಹೊಂದಿದೆ. ಭವಿಷ್ಯದಲ್ಲಿ ಈ ಪ್ರಮಾಣವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದವರು ತಿಳಿಸಿದ್ದಾರೆ.

ಎಂಆರ್‌ಪಿಎಲ್ ಕಚ್ಚಾ ತೈಲ ಆಮದು ಮಾಡಿ ಕೊಂಡು ಸಂಸ್ಕರಣೆ ಆರಂಭಿಸಿ 27 ವರ್ಷಗಳಾಗಿವೆ. ಮುಂದಿನ ವಿಸ್ತರಣೆ ಯೋಜನೆಯಲ್ಲಿ ಇಂಧನ ಹಾಗೂ ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಲಾಗಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

ಸಾರ್ವಜನಿಕ ಸೇವೆ ಮತ್ತು ಪರಿಸರ ಸ್ನೇಹಿ ಯೋಜನೆಗಳು: ಎಂಆರ್ ಪಿಎಲ್ 350 ಎಕರೆ ಹಸಿರು ಪರಿಸರವನ್ನು ಉಳಿಸಿಕೊಂಡಿದೆ. ತಣ್ಣೀರುಬಾವಿ, ಬೆಂಗ್ರೆ ಪರಿಸರ, ಪಿಲಿಕುಳದಲ್ಲಿ 50 ಎಕರೆ ಪ್ರದೇಶದಲ್ಲಿ ಹಸಿರು ಪರಿಸರದ ಅಭಿವೃದ್ಧಿಗೆ ನೆರವು ನೀಡಿದೆ. ಪಿಲಿಕುಳದ 150 ಪ್ರಾಣಿಗಳ ಪೋಷಣೆಗೆ ಎರಡು ವರ್ಷ ನೆರವು ನೀಡಿದೆ. ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಎಂಟು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿ ಸಿದೆ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಗೆ 30 ಕೋಟಿ ರೂ. ವೆಚ್ಚದಲ್ಲಿ ನವೀಕೃತ ಕಟ್ಟಡ ನಿರ್ಮಿ ಸಿದೆ. ಕೋವಿಡ್ ಸಂದರ್ಭದಲ್ಲಿ ಪಿಪಿ ಕಿಟ್, ಮಾಸ್ಕ್ ತಯಾರಿಕೆ, ಆಹಾರ ಕಿಟ್ ಒದಗಿಸುವ ಮೂಲಕ ಸಂಸ್ಥೆ ಸಹಕಾರ ನೀಡಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.

1999ರಲ್ಲಿ ಆರಂಭಗೊಂಡ ಎಂಆರ್ ಪಿಎಲ್ ಸಂಸ್ಥೆ 2003ರಲ್ಲಿ ಒಎನ್ ಜಿಸಿ ಜೊತೆ ಸಂಯೋಜನೆ ಗೊಂಡು ಕಾರ್ಯ ನಿರ್ವಹಿಸುತ್ತಿದೆ. 2014ರಲ್ಲಿ ಮೂರನೇೆ ಹಂತದ ವಿಸ್ತರಣಾ ಯೋಜನೆಯೊಂದಿಗೆ ಒಎಂಪಿಎಲ್ ಸೇರ್ಪಡೆಗೊಂಡಿದೆ. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಉತ್ಪಾದನೆಯೊಂದಿಗೆ 1996ರಿಂದ ಸೀಸಮುಕ್ತ ಪೆಟ್ರೋಲ್, ಬಿಎಸ್ 6 ಮಾದರಿಯ ಪೆಟ್ರೋಲ್ ಉತ್ಪಾದನೆ ಮಾಡುವ ಸಂಸ್ಕರಣಾ ಘಟಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವೆಂಕಟೇಶ್ ವಿವರಿಸಿದರು.

ಕೋಕರ್ ಹೈಡ್ರೋ ಟ್ರೀಟರ್ ಘಟಕ ಸೇರಿದಂತೆ ಯಾವುದೇ ಘಟಕದಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯ ಯಾವುದೇ ಕಾರ್ಯಾಚರಣೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಎಂಆರ್‌ಪಿಎಲ್ ವ್ಯಾಪ್ತಿ ಯಿಂದ ಸುಮಾರು 10 ಕಿ.ಮೀ. ಹೊರಭಾಗದಲ್ಲಿ ಅಂತರ್ಜಲ, ಪರಿಸರ ಮಾಲಿನ್ಯದ ಬಗ್ಗೆ ಅಧ್ಯಯನ ಮಾಡಿರುವ ರಾಷ್ಟ್ರಮಟ್ಟದ ತಜ್ಞರ(ನೀರು)ಸಮಿತಿ ಪರಿಸರ ಹಾಗೂ ಅಂತರ್ಜಲ ಮಲಿನದ ಸಮಸ್ಯೆ ಆಗಿಲ್ಲ ಎನ್ನುವ ವರದಿ ನೀಡಿದೆ. ಮನಪಾ ತ್ಯಾಜ್ಯ ನೀರನ್ನು ಕಾರ್ಖಾನೆ ಗೆ ಬಳಸಲಾಗುತ್ತಿದೆ ಎಂದವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ರಿಫೈನರಿ ವಿಭಾಗದ ನಿರ್ದೇಶಕ ಸಂಜಯ ವರ್ಮ, ಉತ್ಪಾದನಾ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಬಿ.ಎಚ್.ವಿ.ಪ್ರಸಾದ್, ರಿಫೈನರಿ ವಿಭಾಗದ ಕಾರ್ಯ ನಿರ್ವಾಹಕ ನಿರ್ದೇಶಕ ಶ್ಯಾಮ್‌ಪ್ರಸಾದ್ ಕಾಮತ್, ಕೃಷ್ಣ ಹೆಗ್ಡೆ, ಸಾರ್ವಜನಿಕ ಸಂಪರ್ಕಾಧಿಕಾರಿ ರುಡಾಲ್ಫ್ ಉಪಸ್ಥಿತರಿದ್ದರು.

ಎಂಆರ್‌ಪಿಎಲ್ ವತಿಯಿಂದ ಮುಂದಿನ ಐದು ವರ್ಷಗಳಲ್ಲಿ 500 ರಿಟೇಲ್ ಔಟ್‌ಲೆಟ್‌ಗಳನ್ನು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಆರಂಭಿಸುವ ಗುರಿ ಹೊಂದಲಾಗಿದೆ. ಸದ್ಯ ಪೆಟ್ರೋಲಿಯಂ ಉತ್ಪನ್ನಗಳ 47 ಚಿಲ್ಲರೆ ಮಾರಾಟ ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು, 30 ಮಳಿಗೆಗಳು ನಿರ್ಮಾಣ ಹಂತದಲ್ಲಿವೆ.
-ಎಂ.ವೆಂಕಟೇಶ್ ವ್ಯವಸ್ಥಾಪಕ ನಿರ್ದೇಶಕರು, ಎಂಆರ್‌ಪಿಎಲ್

Similar News