"ಕಾಶ್ಮೀರಕ್ಕೆ ಹೋಗಿ, ನಿಮ್ಮ ಹತ್ಯೆಗೆ ಭಯೋತ್ಪಾದಕನನ್ನು ಕಳುಹಿಸುತ್ತೇವೆ"

ತ.ನಾ. ರಾಜ್ಯಪಾಲರಿಗೆ ಡಿಎಂಕೆ ಕಾರ್ಯಕರ್ತನ ಬೆದರಿಕೆ

Update: 2023-01-14 16:25 GMT

ಹೊಸದಿಲ್ಲಿ, ಜ. 14: ರಾಜ್ಯ ಸರಕಾರ ಸಿದ್ಧಪಡಿಸಿಕೊಟ್ಟ ಭಾಷಣದಿಂದ ಡಾ. ಬಿ.ಆರ್. ಅಂಬೇಡ್ಕರ್, ಪೆರಿಯಾರ್ ಅವರಂತಹ ಉನ್ನತ ನಾಯಕರ ಹೆಸರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಡಿಎಂಕೆ ಕಾರ್ಯಕರ್ತರೊಬ್ಬರು ರಾಜ್ಯಪಾಲರನ್ನು ಉದ್ದೇಶಿಸಿ ನಿಂದನೀಯವಾಗಿ ಮಾತನಾಡಿದ್ದು,

ಇದೀಗ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಭಾಷಣದಲ್ಲಿ ಅಂಬೇಡ್ಕರ್ ಹೆಸರನ್ನು ಉಲ್ಲೇಖಿಸಲು ಆಗದಿದ್ದರೆ, ನೀವು ಕಾಶ್ಮೀರಕ್ಕೆ ಹೋಗಿ. ನಿಮ್ಮನ್ನು ಹತ್ಯೆ ಮಾಡಲು ಅಲ್ಲಿಗೆ ತೀವ್ರವಾದಿಯನ್ನು ಕಳುಹಿಸುತ್ತೇವೆ ಎಂದು ಡಿಎಂಕೆ ಕಾರ್ಯಕರ್ತ ಶಿವಾಜಿ ಕೃಷ್ಣಮೂರ್ತಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ‘‘ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅವರ ಹೆಸರನ್ನು ಭಾಷಣದಲ್ಲಿ ಉಲ್ಲೇಖಿಸಲು ತಮಿಳುನಾಡಿನಲ್ಲಿ ಈ ವ್ಯಕ್ತಿ (ರಾಜ್ಯಪಾಲರು) ನಿರಾಕರಿಸಿದರೆ, ನಾನು ಚಪ್ಪಲಿಯಲ್ಲಿ ಹೊಡೆಯಬಹುದಲ್ಲವೇ ? ಇವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರಲ್ಲವೇ ? ಅಂಬೇಡ್ಕರ್ ಅವರು ಸಂವಿಧಾನ ರಚಿಸಿದವರಲ್ಲವೇ ? ಅಂಥವರ ಹೆಸರನ್ನು ಹೇಳಲಾಗದಿದ್ದರೆ ನೀವು (ರಾಜ್ಯಪಾಲರು) ಕಾಶ್ಮೀರಕ್ಕೆ ಹೋಗಿ. ಅಲ್ಲಿ ನಿಮ್ಮನ್ನು ಗುಂಡಿಕ್ಕಿ ಹತ್ಯೆಗೈಯಲು ನಾವು ತೀವ್ರವಾದಿಗಳನ್ನು ಕಳುಹಿಸುತ್ತೇವೆ’’ ಎಂದು ಶಿವಾಜಿ ಕೃಷ್ಣಮೂರ್ತಿ ಹೇಳಿದ್ದಾರೆ.

ಆದರೆ, ರಾಜ್ಯಪಾಲರ ಕುರಿತು ಶಿವಾಜಿ ಕೃಷ್ಣಮೂರ್ತಿ ನೀಡಿದ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿರುವ ಡಿಎಂಕೆ, ತಮ್ಮ ಪಕ್ಷ ರಾಜ್ಯಪಾಲರನ್ನು ಗೌರವಿಸುತ್ತದೆ. ದ್ವೇಷದಿಂದ ಕೂಡಿದ ಹೇಳಿಕೆ ವೈಯುಕ್ತಿಕವಾದದ್ದು. ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದೆ.

ಈ ನಡುವೆ ಶಿವಾಜಿ ಕೃಷ್ಣಮೂರ್ತಿಯನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಡಿಎಂಕೆ ಭಯೋತ್ಪಾದನೆ ನಂಟು ಇದೆ ಎಂದು ಕೂಡ ಬಿಜೆಪಿ ಆರೋಪಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ತನಗೆ ಇದರಿಂದ ಅಚ್ಚರಿಯಾಗಿಲ್ಲ. ಮುಖ್ಯಮಂತ್ರಿ ಸ್ಟಾಲಿನ್ ಹುಟ್ಟು ಹಾಕಿರುವ ಹೊಸ ವಿಧಾನವಿದು. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ ಎಂದಿದ್ದಾರೆ. 

Similar News