ಎಫ್‌ಸಿಐ ಹಗರಣ: 39ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ ದಾಳಿ

Update: 2023-01-14 16:30 GMT

ಹೊಸದಿಲ್ಲಿ, ಜ. 14: ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಫ್‌ಸಿಐ) ಅಧಿಕಾರಿಗಳು, ಅಕ್ಕಿ ಗಿರಣಿಯ ಮಾಲಕರು ಹಾಗೂ ಧಾನ್ಯ ವ್ಯಾಪಾರಿಗಳ ಭ್ರಷ್ಟ ಕೂಟದ ವಿರುದ್ಧ ‘ಆಪರೇಷನ್ ಕನಕ್’ ಕಾರ್ಯಾಚರಣೆ ಭಾಗವಾಗಿ ಸಿಬಿಐ ಶನಿವಾರ 39ಕ್ಕೂ ಅಧಿಕ ಸ್ಥಳಗಳಲ್ಲಿ ದಾಳಿ ನಡೆಸಿದೆ ಹಾಗೂ ಇನ್ನೊಬ್ಬನನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಸಿಬಿಐ ತಂಡ ಈ ದಾಳಿ ಸಂದರ್ಭ ಮತ್ತೆ 23 ಲಕ್ಷ ರೂಪಾಯಿ ವಶಪಡಿಸಿಕೊಂಡಿದೆ. ಇದರೊಂದಿಗೆ ಈ ಹಗರಣಕ್ಕೆ ಸಂಬಂಧಿಸಿ ವಶಪಡಿಸಿಕೊಳ್ಳಲಾದ ಒಟ್ಟು ಮೊತ್ತ 1.03 ಕೋಟಿ ರೂಪಾಯಿಗೆ ತಲುಪಿದೆ.

ಈ ಭ್ರಷ್ಟ ಕೂಟದ ಸಂಪರ್ಕ ಪತ್ತೆ ಹಚ್ಚಲು ಸಿಬಿಐ ಇದುವರೆಗೆ 99 ಸ್ಥಳಗಳಲ್ಲಿ ದಾಳಿ ನಡೆಸಿದೆ. ಪಂಜಾಬ್‌ನ 90 ಸ್ಥಳಗಳು ಹಾಗೂ ಉತ್ತರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದ ಇತರ 9 ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಟಿಯಾಲದಲ್ಲಿರುವ ಎಫ್‌ಸಿಐಯ ಇನ್ನೋರ್ವ ಮ್ಯಾನೇಜರ್ ಸತೀಶ್ ವರ್ಮಾನನ್ನು ಸಿಬಿಐ ಬಂಧಿಸಿದೆ. ಆತನನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.

Similar News