'ವೇಯ್ಟ ಲಿಫ್ಟಿಂಗ್ ಫೇರಿ; ಕಿ ಬೋಕ್ ಜೂ': ಭಾವನೆಗಳ ಭಾರ ಹೊತ್ತ ಹದಿಹರೆಯ!

Update: 2023-01-15 08:19 GMT

ಕ್ರೀಡೆಯನ್ನು ಕೇಂದ್ರವಾಗಿಟ್ಟುಕೊಂಡ ಪ್ರೇಮ ಕತೆಗಳಿಗೆ ಕೊರಿಯನ್ ಡ್ರಾಮ ಹೆಸರು ವಾಸಿ. ಕ್ರೀಡೆಯೊಳಗಿನ ರಾಜಕೀಯ ಮಾತ್ರವಲ್ಲ, ಅದರ ಜೊತೆಗೆ ಹದಿಹರೆಯದ ಭಾವನೆಗಳನ್ನು ನವಿರಾಗಿ ಅಭಿವ್ಯಕ್ತಿಗೊಳಿಸುವ ಹತ್ತು ಹಲವು ಕೊರಿಯನ್ ಸರಣಿಗಳು ಈಗಾಗಲೇ ಬಂದಿವೆ. 'ಟ್ವೆಂಟಿ ಫೈವ್, ಟ್ವೆಂಟಿ ವನ್' ಕತ್ತಿವರಸೆಯ ಹಿಂದೆ ಬಿದ್ದ ತರುಣಿಯೊಬ್ಬಳ ಕತೆ. ಆಕೆಗೆ ಒತ್ತಾಸೆಯಾಗಿ ನಿಲ್ಲುವ ಇನ್ನೊಬ್ಬ ತರುಣನ ಜೊತೆಗಿನ ಪ್ರೀತಿ, ಸ್ನೇಹವನ್ನು ಹೃದಯಸ್ಪರ್ಶಿಯಾಗಿ ಈ ಸರಣಿ ಕಟ್ಟಿಕೊಡುತ್ತದೆ. 'ರನ್ ಆನ್' ವೇಗದ ಓಟದ ಹಿಂದೆ ಬಿದ್ದ ಶ್ರೀಮಂತ ಯುವಕನ ಕತೆ. ಹಾಗೆಯೇ 'ಪ್ರಿಸನ್ ಪ್ಲೇ ಬುಕ್' 'ಫೈಟ್ ಮೈ ವೇ' 'ರಾಕೆಟ್ ಬಾಯ್ಸಿ'...ಇವೆಲ್ಲ ಬೇರೆ ಬೇರೆ ಕ್ರೀಡೆಗಳನ್ನು ಹದಿಹರೆಯದ ಕತೆಯಾಗಿಸಿ ಯಶಸ್ವಿಯಾದ ಸರಣಿಗಳು. ಅವುಗಳಲ್ಲಿ ಒಂದು ಯಶಸ್ವೀ ಜನಪ್ರಿಯ ಸರಣಿ 'ವೇಯ್ಟಿ ಲಿಫ್ಟಿಂಗ್ ಫೇರಿ; ಕಿ ಬೋಕ್ ಜೂ'.

'ವೇಯ್ಟ ಲಿಫ್ಟಿಂಗ್' ರೊಮ್ಯಾಂಟಿಕ್ ಚೌಕಟ್ಟಿಗೆ ಒಗ್ಗದ ಕ್ರೀಡೆ ಎನ್ನುವ ಮನಸ್ಥಿತಿ ನಮ್ಮಿಳಗಿದೆ. ಹೀಗಿರುವಾಗ ವೇಯ್ಟಿಲಿಫ್ಟಿಂಗ್ ಕ್ರೀಡಾಳು ಒಬ್ಬಾಕೆ ಪ್ರೇಮದ ಸೆತಕ್ಕೆ ಬಿದ್ದರೆ? ವೇಯ್ಟೆ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಬೇಕು ಎಂದು ಹೊರಡುವ ವಿದ್ಯಾರ್ಥಿನಿಯೊಬ್ಬಳ ಹರೆಯದ ತಲ್ಲಣಗಳನ್ನು 'ವೇಯ್ಟಾ ಲಿಫ್ಟಿಂಗ್ ಫೇರಿ; ಕಿ ಬೋಕ್ ಜೂ' ಸರಣಿ ಹೇಳುತ್ತದೆ. ಜನಪ್ರಿಯ ಕೊರಿಯನ್ ಡ್ರಾಮಗಳಿಗಾಗಿ ಈಗಾಗಲೇ ಗುರುತಿಸಲ್ಪಟ್ಟಿರುವ ಓಹ್ ಹ್ಯೂನ್ ಜೋಂಗ್ ನಿರ್ದೇಶನದ ಸರಣಿ ಇದು. ವೇಯ್ಟಿ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಪಡೆದಿರುವ ಕ್ರೀಡಾಳು ಜಂಗ್ ಮಿ ರ್ಯಾನ್ ಅವರ ಬದುಕಿನ ಎಳೆಗಳನ್ನು ಆಧರಿಸಿ ಕತೆಯನ್ನು ಹೆಣೆಯಲಾಗಿದೆ. ಆದರೆ ಇದು ಬರೇ ಕ್ರೀಡಾಳುವೊಬ್ಬಳ ಚಿತ್ರವಾಗದೆ, ಅದರಾಚೆಗೆ ಇಬ್ಬರು ಹುಡುಗ-ಹುಡುಗಿಯರ ಹರೆಯದ ಭಾವನೆಗಳನ್ನು ತೆರೆದುಕೊಡುವ ಲವಲವಿಕೆಯ ಸರಣಿಯಾಗಿ ನಮ್ಮನ್ನು ಕಾಡುತ್ತದೆ. 2016-17ರಲ್ಲಿ ಬಿಡುಗಡೆಗೊಂಡ ಈ ಸರಣಿ ಇದೀಗ ನೆಟ್‌ಫ್ಲಿಕ್ಸ್ ನಲ್ಲಿ ವೀಕ್ಷಕರನ್ನು ಸೆಳೆಯುತ್ತಿದೆ. ಒಟ್ಟು 16 ಕಂತುಗಳ ಕ್ರೀಡಾಳುಗಳ ನಡುವಿನ ಪ್ರೀತಿ, ಪ್ರೇಮ, ವಿರಸ, ಸರಸಗಳನ್ನೊಳಗೊಂಡ ಸರಣಿ ಇದು. ಕತೆ ನಡೆಯುವುದು ಮತ್ತು ಬೆಳೆಯುವುದು ಅತ್ಲೆಟಿಕ್ಸ್ ಕಾಲೇಜ್ ಕ್ಯಾಂಪಸ್‌ನಲ್ಲಿ. ಕತೆಯ ಪ್ರಧಾನ ಪಾತ್ರ ಕಿ ಬೋಕ್ ಜೂ. ಬಾಲ್ಯದಲ್ಲಿ ಡುಮ್ಮಿಯಾಗಿದ್ದ ಈಕೆ ಬೆಳೆಯುತ್ತಾ ವೇಯ್ಟಾಲಿಫ್ಟಿಂಗ್‌ನಲ್ಲಿ ಸಾಧನೆ ಮಾಡುವ ಕನಸು ಕಾಣುತ್ತಾಳೆ.

ನಗರದಲ್ಲಿ ಚಿಕನ್ ಹೊಟೇಲ್ ಒಂದನ್ನು ಹೊಂದಿರುವ ಆಕೆಯ ತಂದೆ ಆಕೆಯ ಕನಸಿಗೆ ಜೊತೆ ನಿಲ್ಲುತ್ತಾನೆ. ಹತ್ತು ಹಲವು ಕ್ರೀಡೆಗಳಿಗಾಗಿ ಸಾಧನೆ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳಿರುವ ಕ್ಯಾಂಪಸ್ ಅದು. ಈಜು ಸ್ಪರ್ಧೆಯಲ್ಲಿ ಗುರುತಿಸಲ್ಪಟ್ಟಿರುವ ಜೂನ್ ಹ್ಯೂಂಗ್ ಕೂಡ ಅದೇ ಕ್ಯಾಂಪಸ್‌ನಲ್ಲಿ ಅಭ್ಯಾಸ ಮಾಡುತ್ತಿರುತ್ತಾನೆ. ಬೋಕ್ ಜೂ ಮತ್ತು ಜೂನ್ ಹ್ಯೂಂಗ್ ತೀರಾ ಎಳವೆಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಗೆಳೆಯರಾಗಿದ್ದವರು. ಎಷ್ಟೋ ವರ್ಷಗಳ ಬಳಿಕ ಈ ಕ್ರೀಡಾ ಕ್ಯಾಂಪಸ್‌ಗಳಲ್ಲಿ ಪರಸ್ಪರ ಸಂಧಿಸುತ್ತಾರೆ. ಬೋಕ್ ಜೂ ಳ ಮುಗ್ಧತೆ, ಸೌಂದರ್ಯ, ಆಕೆಯ ಬೋಳೆತನ ಇವುಗಳಿಗೆ ಈಜು ವಿದ್ಯಾರ್ಥಿ ಜೂನ್ ಹ್ಯೂಂಗ್ ಆಕರ್ಷಿತನಾಗುತ್ತಾನೆ. ಸದಾ ಆಕೆಯನ್ನು ಚುಡಾಯಿಸುವುದು, ಆಕೆಯನ್ನು 'ಡುಮ್ಮಿ' ಎಂದು ಕರೆದು ಕೆರಳಿಸುವುದು ಆತನಿಗೆ ಪ್ರಿಯ ಅಭ್ಯಾಸ. ತನ್ನ ತಂದೆ ಮತ್ತು ಕ್ಯಾಂಪಸನ್ನೇ ಜಗತ್ತು ಎಂದು ತಿಳಿದುಕೊಂಡಿದ್ದ ಬೋಕ್ ಜೂ ಒಂದು ದಿನ ಒಬ್ಬ ವೈದ್ಯನ ಸೌಂದರ್ಯ ಮತ್ತು ಗುಣಕ್ಕೆ ಆಕರ್ಷಿತಳಾಗುತ್ತಾಳೆ. ಆತ ಈಜು ಪಟು ಜೂನ್ ಹ್ಯೂಂಗ್‌ನ ಅಣ್ಣ.

ಆ ಸುಂದರ ವೈದ್ಯನನ್ನು ಕಾಣುವುದಕ್ಕಾಗಿಯೇ, ತೂಕ ಇಳಿಸುವ ನೆಪದಲ್ಲಿ ಆಕೆ ಆತನ ಹಾಸ್ಪಿಟಲ್‌ಗೆ ತೆರಳುತ್ತಾಳೆ. ಅಲ್ಲಿ ತಾನು ವೇಟ್ ಲಿಫ್ಟರ್ ಎನ್ನುವುದನ್ನು ಮುಚ್ಚಿಟ್ಟು ಸಂಗೀತಗಾರ್ತಿಯೆಂದು ಸುಳ್ಳು ಹೇಳುತ್ತಾಳೆ. ಇತ್ತ ವೇಯ್ಟಾ ಲಿಫ್ಟಿಂಗ್‌ನ ಕೋಚ್‌ಗಳು ಆಕೆಯಲ್ಲಿ 'ತೂಕವನ್ನು ಹೆಚ್ಚಿಸಬೇಕು' ಎಂದು ಒತ್ತಡ ಹೇರುತ್ತಾರೆ. ವೇಯ್ಟಾ ಲಿಫ್ಟರ್ ಆದರೇನು? ಎಲ್ಲ ಹೆಣ್ಣಿನಂತೆ ತಾನು ಕೂಡ ಸುಂದರವಾಗಿರಬೇಕು ಎಂದು ಆಕೆ ಬಯಸುತ್ತಾಳೆ. ಹುಡುಗನೊಬ್ಬನನ್ನು ಇಷ್ಟ ಪಟ್ಟು ಆತನೊಂದಿಗೆ ರೊಮ್ಯಾಂಟಿಕ್ ಆಗಿ ಕಾಲ ಕಳೆಯಲು ಇಷ್ಟಪಡುತ್ತಾಳೆ. ಹೆಣ್ಣಿನ ಒಳಗಿನ ಸುಪ್ತ ಭಾವನೆಗಳ ಮೇಲೆ ವೇಯ್ಟಿ ಲಿಫ್ಟಿಂಗ್ ಭಾರ ಹೇರಿದಾಗ ಆಕೆ ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡುವ ಸನ್ನಿವೇಶ ನಿರ್ಮಾಣವಾಗಬಹುದು. ಸ್ಪರ್ಧೆಯಲ್ಲಿ ಭಾರವನ್ನು ಎತ್ತುವ ಸಂದರ್ಭದಲ್ಲಿ ತಾನು ಪ್ರೀತಿಸಿದ ಹುಡುಗ ಯಾವ ಕಾರಣಕ್ಕೂ ಅಲ್ಲಿರಬಾರದು ಎಂದು ವೇಯ್ಟಿಲಿಫ್ಟರ್ ಹೆಣ್ಣೊಬ್ಬಳು ಬಯಸುತ್ತಾಳಂತೆ.

ಯಾಕೆಂದರೆ, ಹುಡುಗರು ಬಳುಕುವ, ಕೋಮಲ ಹೆಣ್ಣನ್ನು ಇಷ್ಟಪಡುತ್ತಾರೆ. ತನ್ನೆಲ್ಲ ಶಕ್ತಿಯನ್ನು ಪ್ರಯೋಗಿಸಿ ಭಾರ ಎತ್ತುವ ಸಂದರ್ಭದಲ್ಲಿ ಹುಡುಗರ ಕಣ್ಣಿಗೆ ಹೆಣ್ಣಾಗಿ ಆಕೆ ಇಷ್ಟವಾಗಲಾರಳು ಎನ್ನುವ ಆತಂಕ ಬೋಕ್ ಜೂಳದ್ದು. ದುರದೃಷ್ಟವಶಾತ್, ಭಾರ ಎತ್ತುವಾಗ ಆಕೆ ಗುಟ್ಟಾಗಿ ಇಷ್ಟ ಪಡುವ ವೈದ್ಯ ಹೂಬೊಕ್ಕೆಯ ಜೊತೆಗೆ ವೀಕ್ಷಕ ಸ್ಥಾನದಲ್ಲಿ ಬಂದು ಕೂರುತ್ತಾನೆ. ಭಾರ ಎತ್ತುತ್ತಿರುವಾಗಲೇ ಆಕೆ ಆತನನ್ನು ನೋಡುತ್ತಾಳೆ. ಆಕೆಯ ಪಾಲಿಗೆ ಅದು ಅತ್ಯಂತ ಸಂಕಟದ ಸಮಯ. ಭಾರ ಎತ್ತಿ ಪ್ರಥಮ ಸ್ಥಾನವನ್ನು ತನ್ನದಾಗಿಸುತ್ತಾಳೆ. ಆದರೆ ಇಡೀ ರಾತ್ರಿ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಇಂತಹ ಸಂಘರ್ಷದ ಘಟ್ಟದಲ್ಲಿ ಆಕೆಗೆ ಜೊತೆಯಾಗುವುದು ಬಾಲ್ಯ ಸ್ನೇಹಿತನಾಗಿದ್ದ ಈಜುಪಟು ಜೂನ್ ಹ್ಯೂಂಗ್. ನಿಧಾನಕ್ಕೆ ಬೋಕ್ ಜೂ ವಾಸ್ತವಕ್ಕಿಳಿಯುತ್ತಾಳೆ. ವೈದ್ಯನೊಂದಿಗೆ ತನ್ನ ಪ್ರೀತಿ ಮೇಲ್ನೋಟದ ಆಕರ್ಷಣೆ ಎನ್ನುವುದು ಅರಿವಾಗುತ್ತದೆ. ತನ್ನನ್ನು ಚುಡಾಯಿಸುತ್ತಾ, ಕೆರಳಿಸುತ್ತಾ, ತನಗೆ ನೆರವಾಗುತ್ತಾ ಇರುವ ಸ್ನೇಹಿತನೊಳಗಿನ ಪ್ರೀತಿಯನ್ನು ಕಂಡುಕೊಳ್ಳುವಲ್ಲಿ ಅವಳು ಯಶಸ್ವಿಯಾಗುತ್ತಾಳೋ ಇಲ್ಲವೋ ಎನ್ನುವುದೇ ಸರಣಿಯ ಕ್ಲೈಮಾಕ್ಸ್. ಕ್ರೀಡೆಯಲ್ಲಿ ಸಾಧನೆ ಮಾಡುವಾಗ ಹೆಣ್ಣು ಎದುರಿಸಬೇಕಾದ ಭಾವಸಂಘರ್ಷಗಳನ್ನು 'ವೇಯ್ಟ್ ಲಿಫ್ಟಿಂಗ್ ಫೇರಿ; ಕಿ ಬೋಕ್ ಜೂ' ಸರಣಿ ನವಿರಾಗಿ ಕಟ್ಟಿಕೊಡುತ್ತದೆ. ತಂದೆ-ಮಗಳ ಸಂಬಂಧ, ಗೆಳೆಯ-ಗೆಳತಿಯ ನಡುವಿನ ಸಂಬಂಧ, ಕೋಚ್‌ಗಳು-ವಿದ್ಯಾರ್ಥಿಗಳ ನಡುವಿನ ಸಂಬಂಧಗಳನ್ನು ಭಾವಪೂರ್ಣವಾಗಿ ಸರಣಿ ನಿರೂಪಿಸುತ್ತದೆ.

Similar News