ಶಿವಕಥೆ ಕಾರ್ಯಕ್ರಮಕ್ಕೆ 60 ಎಕರೆ ಹೊಲ ನೀಡಿದ ಸಯ್ಯದ್ ಕುಟುಂಬ !

Update: 2023-01-15 03:19 GMT

ಔರಂಗಾಬಾದ್: ಹಿಂದೂ ಸಮುದಾಯದ ಐದು ದಿನಗಳ ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸಲು ಮುಸ್ಲಿಂ ಕುಟುಂಬವೊಂದು ತಮ್ಮ 60 ಎಕರೆ ಹೊಲವನ್ನು ಬಿಟ್ಟುಕೊಟ್ಟಿದ್ದಾರೆ. ಈ ಘಟನೆ ಸಹಬಾಳ್ವೆ ಮತ್ತು ಸಾಮರಸ್ಯಕ್ಕೆ ಉತ್ತಮ ನಿರ್ದಶನ ಎನಿಸಿದೆ.

ಪರ್ಬಾನಿ ಜಿಲ್ಲೆ ಕೋಮುಗಲಭೆಗಳಿಗೆ ಹೆಸರಾಗಿರುವ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆ ಸದಾ ನಿಗಾ ವಹಿಸಿರುವ ಸಂದರ್ಭದಲ್ಲಿ ಇಂಥ ಕ್ರಮ ಎಲ್ಲರ ಹೃದಯ ಗೆದ್ದಿದೆ. ಶಿವಸೇನೆ ಶಾಸಕ ಸಂಜಯ್ ಜಾಧವ್ ಅವರು ಶಿವಪುರಾಣ ಕಥೆ ಆಯೋಜಿಸಲು ರಸ್ತೆ ಸಂಪರ್ಕ ಇರುವ ವಿಶಾಲವಾದ ಬಯಲು ಭೂಮಿಯ ಹುಡುಕಾಟದಲ್ಲಿದ್ದಾರೆ ಎಂಬ ಮಾಹಿತಿ ಗೊತ್ತಾದ ತಕ್ಷಣ ಸಯ್ಯದ್ ಎಂಬುವವರ ಕುಟಂಬ ಸ್ವಯಂಪ್ರೇರಣೆಯಿಂದ ತಮ್ಮ ಭೂಮಿಯನ್ನು ಈ ಕಾರ್ಯಕ್ರಮಕ್ಕೆ ಬಿಟ್ಟುಕೊಡಲು ಮುಂದಾಯಿತು.

ಐದು ದಿನಗಳ ಕಾರ್ಯಕ್ರಮಕ್ಕೆ ಭೂಮಿಯನ್ನು ಉಚಿತವಾಗಿ ನೀಡಿದ್ದು, ಮಾತ್ರವಲ್ಲದೇ, 15 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ ಹಾಗೂ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಹೆಸರು ಬೆಳೆಯನ್ನು ನೆಲಸಮ ಮಾಡಿದೆ. ಇವರ ಈ ಸದ್ಭಾವನಾ ಕ್ರಮದಿಂದಾಗಿ ಶನಿವಾರ ಶಿವಕಥೆ ಆರಂಭವಾಗಿದೆ.

"ಸದ್ಯಕ್ಕೆ ಕೋಮು ಧ್ರುವೀಕರಣ ದೇಶದ ಮುಂದಿರುವ ದೊಡ್ಡ ಸವಾಲು. ವಿವಿಧ ಧಾರ್ಮಿಕ ನಂಬಿಕೆಯ ಜನರ ನಡುವಿನ ಅಂತರವನ್ನು ನಿಸ್ವಾರ್ಥವಾಗಿ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇವೆ" ಎಂದು ಕುಟುಂಬದ 25 ವರ್ಷ ವಯಸ್ಸಿನ ಯುವಕ ಸಯ್ಯದ್ ಶೊಹೈಬ್ ಹೇಳಿದ್ದಾರೆ.

"ಎಲ್ಲ ಕಡೆಗಳಲ್ಲಿ ಬಯಲು ಪ್ರದೇಶದಲ್ಲಿ ಬೆಳೆ ಇದ್ದ ಕಾರಣದಿಂದ ಅವರಿಗೆ ಜಾಗ ಸಿಕ್ಕಿರಲಿಲ್ಲ. ಧಾರ್ಮಿಕ ಕಾರ್ಯಕ್ರಮ ಆಯೋಜಿಸಲು ಎಲ್ಲಾದರೂ ಖಾಲಿ ಜಾಗ ಬಾಡಿಗೆಗೆ ಇದೆಯೇ ಎಂದು ಕೆಲವರು ನಮ್ಮನ್ನು ಸಂಪರ್ಕಿಸಿ ಕೇಳಿದಾಗ, ನಮ್ಮ ಭೂಮಿಯನ್ನು ನಾವು ಉಚಿತವಾಗಿ ನೀಡಿದೆವು" ಎಂದು ಶೋಯಬ್ ಅವರ ತಂದೆ ಅಬೂಬಕ್ಕರ್ ಭೈಜಾನ್ ಹೇಳಿದ್ದಾರೆ.

Similar News