ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಕರ್ನಾಟಕದ ಗ್ಯಾಂಗ್‌ಸ್ಟರ್ ನಿಂದ ಜೀವ ಬೆದರಿಕೆ

Update: 2023-01-15 06:12 GMT

ಹೊಸದಿಲ್ಲಿ: ಕರ್ನಾಟಕದ ಬೆಳಗಾವಿಯ ಜೈಲಿನಲ್ಲಿರುವ ಗ್ಯಾಂಗಸ್ಟರ್ ನಿಂದ  ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari )ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿವೆ. ನಾಗ್ಪುರ ಪೊಲೀಸರು ಶನಿವಾರ ಕರೆ ಮಾಡಿದವನನ್ನು ಪತ್ತೆಹಚ್ಚಿದ್ದಾರೆ ಎಂದು India Today ವರದಿ ಮಾಡಿದೆ.

ಬೆದರಿಕೆ ಕರೆ ಮಾಡಿದವನನ್ನು ಜಯೇಶ್ ಕಾಂತ ಎಂದು ಗುರುತಿಸಲಾಗಿದೆ.

“ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಜೈಲಿನಿಂದ ಬೆದರಿಕೆ ಹಾಕಲಾಗುತ್ತಿದೆ. ಕರೆ ಮಾಡಿದಾತ ಕುಖ್ಯಾತ ದರೋಡೆಕೋರ ಹಾಗೂ ಕೊಲೆ ಆರೋಪಿ ಜಯೇಶ್ ಕಾಂತ ಬೆಳಗಾವಿ ಜೈಲಿನಲ್ಲಿ ಬಂಧಿಯಾಗಿದ್ದಾನೆ. ಜೈಲಿನೊಳಗೆ ಅಕ್ರಮವಾಗಿ ಫೋನ್ ಬಳಸಿ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದಾನೆ’’ ಎಂದು ನಾಗ್ಪುರದ ಪೊಲೀಸ್ ಆಯುಕ್ತ ಅಮಿತೇಶ್ ಕುಮಾರ್ ಹೇಳಿದ್ದಾರೆ.

"ನಾಗ್ಪುರ ಪೊಲೀಸರ ತಂಡವು ತನಿಖೆಗಾಗಿ ಬೆಳಗಾವಿಗೆ ತೆರಳಿದೆ ಹಾಗೂ  ಪ್ರೊಡಕ್ಷನ್ ರಿಮಾಂಡ್ ಕೇಳಿದೆ" ಎಂದು ಅವರು ಹೇಳಿದರು.

ದಾವೂದ್ ಇಬ್ರಾಹೀಂ ಗ್ಯಾಂಗ್‌ನ ಸದಸ್ಯನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಬೆದರಿಕೆ ಕರೆಗಳನ್ನು ಮಾಡಿ 100 ಕೋಟಿ ರೂ.ಗೆ ಬೇಡಿಕೆಯಿಟ್ಟ ಹಿನ್ನೆಲೆಯಲ್ಲಿ ಶನಿವಾರ ಮಹಾರಾಷ್ಟ್ರದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಿವಾಸ ಹಾಗೂ  ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಖಮ್ಲಾ ಪ್ರದೇಶದಲ್ಲಿರುವ  ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ ಬೆಳಿಗ್ಗೆ 11.25 ರಿಂದ ಮಧ್ಯಾಹ್ನ 12.30 ರ ನಡುವೆ ಮೂರು ಬೆದರಿಕೆ ಕರೆಗಳು ಬಂದಿವೆ.

ಕರೆ ಮಾಡಿದಾತ ತನ್ನ ಮೊಬೈಲ್ ಸಂಖ್ಯೆ ಹಾಗೂ  ಕರ್ನಾಟಕದಲ್ಲಿರುವ ವಿಳಾಸವನ್ನು ಹಂಚಿಕೊಂಡಿದ್ದಾನೆ, ಆ ವಿಳಾಸಕ್ಕೆ ಹಣವನ್ನು ಕಳುಹಿಸಬೇಕು ಎಂದು ಹೇಳಿದ್ದ ಎಂದು ವರದಿಯಾಗಿದೆ.

Similar News