ಬಟ್ಟೆ ಗೋದಾಮಿನಲ್ಲಿ ಕಳವು: ʼಖಾಲಿ ನೀರು ಬಾಟಲಿʼ ಸುಳಿವು ಆಧರಿಸಿ ಪ್ರಕರಣ ಭೇದಿಸಿದ ಪೊಲೀಸರು !

Update: 2023-01-15 10:09 GMT

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದಲ್ಲಿನ ಗಾರ್ಮೆಂಟ್ಸ್ ಗೋದಾಮು ಒಂದರಲ್ಲಿ ನಡೆದಿದ್ದ 99.44 ಲಕ್ಷ ಮೌಲ್ಯದ ಜವಳಿ ಉತ್ಪನ್ನ ಕಳವು ಪ್ರಕರಣವನ್ನು ಕಳವು ಸ್ಥಳದಲ್ಲಿ ದೊರೆತ ಖಾಲಿ ಖನಿಜಯುಕ್ತ ನೀರಿನ ಬಾಟಲಿಯ ಸುಳಿವನ್ನು ಆಧರಿಸಿ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಶನಿವಾರ  ಮಾಹಿತಿ ನೀಡಿರುವ ಭಿವಾಂಡಿ ವಲಯದ ಉಪ ಪೊಲೀಸ್ ಆಯುಕ್ತ ನವಂತ್ ಧಾವ್ಲೆ, ಜನವರಿ 8ರಂದು ಭಿವಾಂಡಿ ಪಟ್ಟಣದಲ್ಲಿರುವ ಗಾರ್ಮೆಂಟ್ಸ್ ಗೋದಾಮೊಂದರಲ್ಲಿ ಜವಳಿ ಉತ್ಪನ್ನಗಳ ಕಳವು ನಡೆದಿತ್ತು. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

ಪೊಲೀಸ್ ತಂಡವು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಒಳಗೊಂಡಂತೆ ಹಲವು ಸುಳಿವುಗಳು ಹಾಗೂ ಗುಪ್ತಚರ ವರದಿಯನ್ನು ಆಧರಿಸಿ ತನಿಖೆ ಕೈಗೊಂಡಿತ್ತು. ತಂಡಕ್ಕೆ ಘಟನಾ ಸ್ಥಳದಲ್ಲಿ ಖಾಲಿ ಖನಿಜಯುಕ್ತ ನೀರಿನ ಬಾಟಲಿಗಳು ಮತ್ತು ಖಾಲಿ ಚಿಪ್ಸ್ ಪೊಟ್ಟಣಗಳೂ ದೊರೆತಿದ್ದವು ಎಂದು ತಿಳಿಸಿದ್ದಾರೆ.

ಈ ಸುಳಿವನ್ನು ಆಧರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಘಟನಾ ಸ್ಥಳದಲ್ಲಿ ದೊರೆತ ಖಾಲಿ ನೀರಿನ ಬಾಟಲಿಗಳು ಹಾಗೂ ಘಟನಾ ಸ್ಥಳದ ಸಮೀಪದಲ್ಲೇ ಇರುವ ಹೋಟೆಲ್‌ ಒಂದರಲ್ಲಿ ಪೂರೈಸುವ ನೀರಿನ ಬಾಟಲಿಗಳಿಗೂ ಹೋಲಿಕೆ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಈ ಸುಳಿವನ್ನು ಆಧರಿಸಿ ಪೊಲೀಸರು ಹೋಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಓರ್ವ ವ್ಯಕ್ತಿ ಅಲ್ಲಿಂದ ನೀರಿನ ಬಾಟಲಿಗಳನ್ನು ಖರೀದಿಸಿರುವುದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.

ನಂತರ ಅಪರಾಧ ಹಿನ್ನೆಲೆ ಹೊಂದಿರುವ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ ಕಳವಾಗಿದ್ದ ಪೂರ್ಣ ಪ್ರಮಾಣದ ಜವಳಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Similar News