ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಪಡೆದ ಬಳಿಕ ರಾಜಮೌಳಿ ಭಾಷಣಕ್ಕೆ ವ್ಯಾಪಕ ಪ್ರಶಂಸೆ

ನಟಿ ಕಂಗನಾ ರಣಾವತ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2023-01-16 12:24 GMT

ಹೊಸದಿಲ್ಲಿ: ಲಾಸ್ ಏಂಜಲಿಸ್ ನಲ್ಲಿ ನಡೆದ ಸಮಾರಂಭದಲ್ಲಿ ಅತ್ಯುತ್ತಮ ವಿದೇಶಿ ಭಾಷೆ ಚಲನಚಿತ್ರ ಹಾಗೂ ಅತ್ಯುತ್ತಮ ಹಾಡಿಗಾಗಿ ಕ್ರಿಟಿಕ್ಸ್ ಚಾಯ್ಸ್ ಪ್ರಶಸ್ತಿ ಪಡೆದ ನಂತರ RRR ಚಿತ್ರದ ನಿರ್ದೇಶಕ ಎಸ್ಎಸ್ ರಾಜಮೌಳಿ ನೀಡಿದ ಭಾಷಣ ನೆಟ್ಟಿಗರ ಮನ ಗೆದ್ದಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಪ್ರಶಸ್ತಿಯನ್ನು ತಮ್ಮ ಜೀವನದಲ್ಲಿನ ಮಹಿಳೆಯರಿಗೆ ಸಮರ್ಪಿಸಿದ ರಾಜಮೌಳಿ ಹೀಗೆಂದು ಹೇಳಿದ್ದರು- "ನನ್ನ ಜೀವನದ ಎಲ್ಲಾ ಮಹಿಳೆಯರಿಗೆ. ನನ್ನ ತಾಯಿ ರಾಜನಂದನಿ, ಶಾಲಾ ಶಿಕ್ಷಣಕ್ಕೆ ಅತಿಯಾದ ಮಹತ್ವ ನೀಡಲಾಗಿದೆ ಎಂದು ಆಕೆ ಅಂದುಕೊಂಡರು ಹಾಗೂ ಕಾಮಿಕ್ಸ್, ಕಥೆಪುಸ್ತಕ ಓದಲು ನನಗೆ ಪ್ರೋತ್ಸಾಹಿಸಿ ನನ್ನ ಸೃಜನಶೀಲತೆ ಪ್ರೋತ್ಸಾಹಿಸಿದರು.

ನನ್ನ ಅತ್ತಿಗೆ ಶ್ರೀವಳ್ಳಿ, ಆಕೆ ನನ್ನ ತಾಯಿಯಿದ್ದಂತೆ ಹಾಗೂ ನನ್ನನ್ನು ಪ್ರೋತ್ಸಾಹಿಸಿದ್ದಾರೆ. ನನ್ನ ಪತ್ನಿ. ನನ್ನ ಚಲನಚಿತ್ರಗಳ ವಸ್ತ್ರ ವಿನ್ಯಾಸಕಿಯಾಗಿದ್ದಾಳೆ ಮಾತ್ರವಲ್ಲ ನನ್ನ ಜೀವನದ ವಿನ್ಯಾಸಕಿ. ನನ್ನ ಪುತ್ರಿಯರು, ಅವರೇನು ಮಾಡದೇ ಇದ್ದರೂ ಅವರ ನಗುವೊಂದೇ ನನ್ನ ಜೀವನ ಬೆಳಗಿಸಲು ಸಾಕು," ಎಂದು ರಾಜಮೌಳಿ ಹೇಳಿದ್ದರು.

ಈ ಭಾಷಣದ ವೀಡಿಯೋ ಕ್ಲಿಪ್ ಅನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ ಕಂಗನಾ "ಭಾರತೀಯರು ಅಮೆರಿಕಾದಲ್ಲೂ ಗರಿಷ್ಠ ಗಳಿಕೆಯ ಹಾಗೂ ಅತ್ಯಂತ ಯಶಸ್ವಿ ಸಮುದಾಯ ಎಂದು ಗುರುತಿಸಲ್ಪಟ್ಟಿದ್ದಾರೆ ಹಾಗೂ ತಳಮಟ್ಟದಿಂದ ಆರಂಭಿಸಿ ಇಷ್ಟೊಂದು ಸಾಧನೆ ಹೇಗೆ ಸಾಧ್ಯ ಎಂದು ಹಲವರು ಯೋಚಿಸುತ್ತಾರೆ, ಇದು ನಮ್ಮ ಸುದೃಢ ಕುಟುಂಬ ವ್ಯವಸ್ಥೆಯಿಂದ ಬಂದಿದೆ, ನಮಗೆ ನಮ್ಮ ಕುಟುಂಬದಿಂದ ಭಾವಾತ್ಮಕ, ಆರ್ಥಿಕ ಮತ್ತು ಮಾನಸಿಕ ಬೆಂಬಲ ದೊರಕುತ್ತದೆ ಮತ್ತು ಕುಟುಂಬಗಳನ್ನು ಮಹಿಳೆಯರು ಒಗ್ಗೂಡಿಸುತ್ತಾರೆ," ಎಂದು ಕಂಗನಾ ಬರೆದಿದ್ದಾರೆ.

ರಾಜಮೌಳಿ ಭಾಷಣ ಶ್ಲಾಘಿಸಿದ ಅಭಿಮಾನಿಯೊಬ್ಬರು "ರಾಜಮೌಳಿ ತಮ್ಮ ಭಾಷಣವನ್ನು ಅಂದರಿಕಿ ನಮಸ್ಕಾರಂ ಎಂದು ಆರಂಭಿಸಿ ಭಾರತ್ ಮಹಾನ್ ಜೈ ಹಿಂದ್ ಎಂದು ಅಂತ್ಯಗೊಳಿಸಿದರು! ಅದು ರಾಜಮೌಳಿ" ಎಂದು ಬರೆದಿದ್ದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ಆ ಅಂತಿಮ ಪದಗಳು, ನನ್ನ ತಾಯ್ನಾಡು ಭಾರತ, ಮೇರಾ ಭಾರತ್ ಮಹಾನ್, ನನ್ನನ್ನು ರೋಮಾಂಚನಗೊಳಿಸಿದೆ. ಜಗತ್ತಿನಲ್ಲಿ ಸಾಧಿಸಲು ಅಸಾಧ್ಯವಾದುದು ಏನೂ ಇಲ್ಲ ಎಂದು ರಾಜಮೌಳಿ ಸಾಬೀತು ಪಡಿಸಿದರು," ಎಂದು ಬರೆದಿದ್ದಾರೆ.

"ರಾಜಮೌಳಿ ಅವರು ನನ್ನ ತಾಯ್ನಾಡು ಭಾರತಕ್ಕೆ, ಮೇರಾ ಭಾರತ್ ಮಹಾನ್ ಅಂದಾಗ ನನಗೇ ತಿಳಿಯದೆ ಕಣ್ಣೀರು ಬಂತು," ಎಂದು ಇನ್ನೊಬ್ಬ ಅಭಿಮಾನಿ ಬರೆದಿದ್ದಾರೆ.

Similar News