ಧೋನಿ, ರೋಹಿತ್‌, ವಿರಾಟ್‌ ಪುತ್ರಿಯರ ಕುರಿತು ಅನುಚಿತ ಹೇಳಿಕೆ: ಟ್ವಿಟರ್‌ ಖಾತೆ ವಿರುದ್ಧ ಪ್ರಕರಣ ದಾಖಲು

Update: 2023-01-16 13:32 GMT

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ತಂಡದ ಆಟಗಾರರಾದ ಮಹೇಂದ್ರ ಸಿಂಗ್‌ ಧೋನಿ, ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾರ ಪುತ್ರಿಯರ ಕುರಿತು ಅನುಚಿತ ಮತ್ತು ಅಸಭ್ಯವಾಗಿ ಪೋಸ್ಟ್‌ ಮಾಡಿದ್ದ ಟ್ವಿಟರ್‌ ಖಾತೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಟ್ವಿಟರ್‌ ಖಾತೆಯ ಹೊಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. 

ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ದೂರಿನ ಆಧಾರದ ಮೇಲೆ ಪೊಲೀಸರ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ ಘಟಕವು ಎಫ್‌ಐಆರ್ ದಾಖಲಿಸಿದೆ. ಪುಟ್ಟ ಮಕ್ಕಳ ವಿರುದ್ಧ ಟ್ವಿಟರ್‌ನಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುತ್ತಿರುವ ಕನಿಷ್ಠ ಆರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಮಹಿಳಾ ಹಕ್ಕುಗಳ ಸಂಸ್ಥೆ ಗುರುತಿಸಿದೆ ಎಂದು ವರದಿಗಳು ತಿಳಿಸಿವೆ.

"ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿನ ಈ ಪೋಸ್ಟ್‌ಗಳು ಅಶ್ಲೀಲ, ಸ್ತ್ರೀದ್ವೇಷ ಮತ್ತು ಚಿಕ್ಕ ಮಕ್ಕಳು ಮತ್ತು ಅವರ ತಾಯಂದಿರ ಬಗ್ಗೆ ಅತ್ಯಂತ ನಿಂದನೀಯವಾಗಿವೆ" ಎಂದು ಎಫ್‌ಐಆರ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಬಿ(ಡಿ) (ಮಕ್ಕಳನ್ನು ಅಶ್ಲೀಲವಾಗಿ ಚಿತ್ರಿಸುವ ವಸ್ತುಗಳನ್ನು ಪ್ರಕಟಿಸಲು ಮತ್ತು ರವಾನಿಸಲು ಶಿಕ್ಷೆ ಇತ್ಯಾದಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Similar News