ಹಿಟ್ ಆ್ಯಂಡ್ ರನ್ ಪ್ರಕರಣ: ನಿವೃತ್ತ ಮೇಜರ್ ಬಂಧನ

Update: 2023-01-17 02:45 GMT

ಚಂಡೀಗಢ: ಅತಿವೇಗದಿಂದ ಎಸ್‌ಯುವಿ ಚಲಾಯಿಸಿ, ರಸ್ತೆ ಬದಿಯಲ್ಲಿ ನಾಯಿಗಳಿಗೆ ಆಹಾರ ನೀಡುತ್ತಿದ್ದ 25 ವರ್ಷ ವಯಸ್ಸಿನ ಯುವತಿಗೆ ಡಿಕ್ಕಿ ಹೊಡೆದು ಆಕೆ ತೀವ್ರ ಗಾಯಗೊಳ್ಳಲು ಕಾರಣವಾದ ಘಟನೆಯ ಸಂಬಂಧ ನಿವೃತ್ತ ಮೇಜರ್ ಒಬ್ಬರನ್ನು ಸೋಮವಾರ ಮೊಹಾಲಿಯಲ್ಲಿ ಬಂಧಿಸಲಾಗಿದೆ.

ತೇಜಶ್ವಿತಾ ಕೌಶಾಲ್ ಎಂಬ ವಾಸ್ತುಶಿಲ್ಪ ಎಂಜಿನಿಯರಿಂಗ್ ವಿದ್ಯಾರ್ಥಿ ಹಾಗೂ ನಾಗರಿಕ ಸೇವಾ ಅಕಾಂಕ್ಷಿಗೆ ವೇಗವಾಗಿ ಬಂದ ಎಸ್‌ಯುವಿ ಡಿಕ್ಕಿಯಾಗಿ, ಪರಾರಿಯಾಗಿತ್ತು. ಘಟನೆಯಲ್ಲಿ ಯುವತಿ ತೀವ್ರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಇದೀಗ ನಿವೃತ್ತ ಮೇಜರ್ ಸಂದೀಪ್ ಸಾಹಿ (40) ಎಂಬುವವರನ್ನು ಬಂಧಿಸಲಾಗಿದೆ.

ಅತಿವೇಗದಿಂದ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ಜೀವಾಪಾಯಕ್ಕೆ ಕಾರಣವಾದ ಹಾಗೂ ವೈಯಕ್ತಿಗೆ ಸುರಕ್ಷತೆಗೆ ಅಪಾಯ ತಂದೊಡ್ಡಿದ ಆರೋಪದಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 279 ಮತ್ತು 337ರ ಅನ್ವಯ ಸಾಹಿ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಸೆಕ್ಟರ್ 53 ಪೀಠೋಪಕರಣಗಳ ಮಾರುಕಟ್ಟೆ ಬಳಿ ಶನಿವಾರ ರಾತ್ರಿ 11.39ಕ್ಕೆ ತೇಜಶ್ವಿತಾ ರಸ್ತೆ ಬದಿ ನಾಯಿಗಳಿಗೆ ಆಹಾರ ತಿನಿಸುತ್ತಿದ್ದಾಗ, ಮೊಹಾಲಿ ಫೇಸ್-2 ಕಡೆಯಿಂದ ವೇಗವಾಗಿ ಬಂದ ಮಹೀಂದ್ರಾ ಥಾರ್ ವಾಹನ ಡಿಕ್ಕಿಯಾಗಿ ಯುವತಿ ತೀವ್ರ ಗಾಯಗೊಂಡದ್ದು ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದು ಬಂದಿದೆ. ಯುವತಿ ರಸ್ತೆ ಬದಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ತಾಯಿ ನೆರವಿಗಾಗಿ ಕೂಗಿಕೊಂಡಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದವರು ಈ ದೃಶ್ಯವನ್ನು ನೋಡಿ ಪೊಲೀಸ್ ನಿಯಂತ್ರಣ ಕಚೇರಿಗೆ ಕರೆ ಮಾಡಿ, ಗಾಯಾಳು ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು.

Similar News