ಲೆಫ್ಟಿನೆಂಟ್ ಗವರ್ನರ್ ನಮ್ಮ ಹೆಡ್ ಮಾಸ್ಟರ್ ಅಲ್ಲ: ಕೇಜ್ರಿವಾಲ್

Update: 2023-01-17 17:34 GMT

ಹೊಸದಿಲ್ಲಿ, ಜ. 17: ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ(V. K.Saxena) ಅವರು ನನ್ನ ಮುಖ್ಯೋಪಾಧ್ಯಯರಲ್ಲ. ಜನರು ನನ್ನನ್ನು ಮುಖ್ಯ ಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್(Arvind Kejriwal) ಅವರು ಮಂಗಳವಾರ ಕಿಡಿ ಕಾರಿದ್ದಾರೆ.

ತನ್ನ ಸರಕಾರದ ಕಾರ್ಯಾನಿರ್ವಹಣೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಹಸ್ತಕ್ಷೇಪ ನಡೆಸುತ್ತಿರುವ ಆರೋಪದ ಬಗ್ಗೆ ದಿಲ್ಲಿ ವಿಧಾನ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ‘‘ಲೆಫ್ಟಿನೆಂಟ್ ಗವರ್ನರ್ ಅವರು ಊಳಿಗಮಾನ್ಯ ಮನಸ್ಥಿತಿಯಿಂದ ಬಳಲುತ್ತಿದ್ದಾರೆ. ಅವರು ನಗರದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದನ್ನು ಬಯಸುತ್ತಿಲ್ಲ’’ ಎಂದಿದ್ದಾರೆ.

ಲೆಫ್ಟಿನೆಂಟ್ ಗವರ್ನರ್ ಯಾರು? ಅವರು ನಮ್ಮ ತಲೆ ಮೇಲೆ ಕೂತಿದ್ದಾರೆ. ನಮ್ಮ ಮಕ್ಕಳು ಹೇಗೆ ಓದಬೇಕು ಎಂದು ನಿರ್ಧರಿಸಲು ಇವರು ಯಾರು? ಈ ಜನರು ನಮ್ಮ ಮಕ್ಕಳನ್ನು ಅವಿದ್ಯಾವಂತರಾಗಲಿ ಎಂದು ಬಿಟ್ಟಿದ್ದಾರೆ. ನಮ್ಮನ್ನು ತಡೆಯಲು ಲೆಫ್ಟಿನೆಂಟ್ ಗವರ್ನರ್ಗೆ ಅಧಿಕಾರ ಇಲ್ಲ. ಬದುಕಿನಲ್ಲಿ ಯಾವುದೂ ಶಾಶ್ವತ ಅಲ್ಲ.ನಾವು ನಾಳೆ ಲೆಫ್ಟಿನೆಂಟ್ ಗವರ್ನರ್ ಜೊತೆಗೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರಬಹುದು. ಆಗ ನಮ್ಮ ಸರಕಾರ ಜನರಿಗೆ ಕಿರುಕುಳ ನೀಡದು ಎಂದು ಕೇಜ್ರಿವಾಲ್ ಅವರು ಹೇಳಿದರು. ನನ್ನ ಶಿಕ್ಷಕರೂ ನನ್ನ ಹೋಮ್ ವರ್ಕ್ ಅನ್ನು ಲೆಫ್ಟಿನೆಂಟ್ ಗವರ್ನರ್ ಅವರಂತೆ ಪರಿಶೀಲಿಸಿಲ್ಲ. ಅಕ್ಷರಗಳು, ಬರೆಹದ ಬಗ್ಗೆ ದೂರಿಲ್ಲ... ಅವರು ನನ್ನ ಮುಖ್ಯೋಪಾಧ್ಯಾಯರೇ ? ನಾನು ಚುನಾಯಿತ ಮುಖ್ಯಮಂತ್ರಿ ಎಂದು ಕೇಜ್ರಿವಾಲ್ ಹೇಳಿದರು.

‘‘ವೆಚ್ಚ-ಪ್ರಯೋಜನದ ವಿಶ್ಲೇಷಣೆ ಬಗ್ಗೆ ಕೇಳಲು ನೀವು ಯಾರು ?’’ ಎಂದು ನಾನು ಅವರನ್ನು (ಲೆಫ್ಟಿನೆಂಟ್ ಗವರ್ನರ್) ಪ್ರಶ್ನಿಸಿದೆ. ಸಾರ್ವಜನಿಕರು ನನ್ನನ್ನು ಆಯ್ಕೆ ಮಾಡಿದರು ಎಂದು ಹೇಳಿದೆ. ಅವರು ರಾಷ್ಟ್ರಪತಿ ನನ್ನನ್ನು ಆಯ್ಕೆ ಮಾಡಿದರು ಎಂದು ತಿಳಿಸಿದರು. ಅದಕ್ಕೆ ನಾನು, ಬ್ರಿಟೀಷರು ವೈಸರಾಯಿಯನ್ನು ಆಯ್ಕೆ ಮಾಡಿದ ರೀತಿಯೇ ? ‘‘ಕೊಳಕು ಭಾರತೀಯರೇ ಹೇಗೆ ಆಡಳಿತ ನಡೆಸುವುದು ಎಂದು ನಿಮಗೆ ತಿಳಿದಿಲ್ಲ’’ ಎಂದು ವೈಸರಾಯಿಗಳು ಆಗಾಗ ಹೇಳುತ್ತಿದ್ದರು.

ಈಗ ನೀವು (ಲೆಫ್ಟಿನೆಂಟ್ ಗವರ್ನರ್) ‘‘ಕೊಳಕು ದಿಲ್ಲಿವಾಲಾಗಳೇ ಹೇಗೆ ಆಡಳಿತ ನಡೆಸುವುದು ಎಂದು ನಿಮಗೆ ತಿಳಿದಿಲ್ಲ’’ ಎಂದು ಹೇಳುತ್ತಿದ್ದೀರಿ ಎಂದು ಕೇಜ್ರಿವಾಲ್ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರನ್ನು ತರಬೇತಿಗೆ ಫಿನ್ಲ್ಯಾಂಡ್ಗೆ ಕಳುಹಿಸುವ ದಿಲ್ಲಿ ಸರಕಾರದ ಯೋಜನೆಗೆ ಲೆಫ್ಟಿನೆಂಟ್ ಗವರ್ನರ್ ತಡೆ ಒಡ್ಡಿದೆ ಎಂದು ಕೇಜ್ರಿವಾಲ್ ಹಾಗೂ ಅವರ ಪಕ್ಷ ಆರೋಪಿಸಿದೆ. ಆದರೆ, ಈ ಆರೋಪವನ್ನು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಬಲವಾಗಿ ನಿರಾಕರಿಸಿದ್ದಾರೆ. ತನಗೆ ಬೇಕಾಗಿರುವುದು ವೆಚ್ಚ-ಪ್ರಯೋಜನದ ವಿಶ್ಲೇಷಣೆ ಎಂದು ಅವರು ಹೇಳಿದ್ದಾರೆ. 

Similar News