ಉಡುಪಿ ಜಿಲ್ಲಾಮಟ್ಟದ ‘ಅಂಬೇಡ್ಕರ್ ಓದು’ ಕಾರ್ಯಕ್ರಮ ಉದ್ಘಾಟನೆ

Update: 2023-01-18 13:44 GMT

ಕುಂದಾಪುರ: ಅಂಬೇಡ್ಕರ್ ಅವರನ್ನು ಅರಿಯುವುದರಿಂದ ಮಾತ್ರ ನಿಜ ವ್ಯಕ್ತಿತ್ವ, ಸಿದ್ದಾಂತ ತಿಳಿಯುತ್ತದೆ. ಅಂಬೇಡ್ಕರ್ ಅವರು ಒಂದು ಸಮು ದಾಯದಲ್ಲಿ ಜನಿಸಿದರೂ ಅವರ ಕೊಡುಗೆ, ವ್ಯಕ್ತಿತ್ವ, ಸಾಧನೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ದೇಶದ ಆಡಳಿತದಲ್ಲಿ ಅಂಬೇಡ್ಕರ್‌ತನ ಹಾಸು ಹೊಕ್ಕಾಗಿದೆಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಹೇಳಿದ್ದಾರೆ.

ಸಮುದಾಯ ಕುಂದಾಪುರ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಸಹಯೋಗ ದೊಂದಿಗೆ ಜ.18ರಂದು ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸ ಲಾದ ಉಡುಪಿ ಜಿಲ್ಲಾ ಮಟ್ಟದ ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ಕಾಂತರಾಜ್ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ ದೊರೆಯಬೇಕು ಎಂಬ ಕಳಕಳಿ ಅಂಬೇಡ್ಕರ್ ಅವರದ್ದಾಗಿತ್ತು. ಅಂಬೇಡ್ಕರ್ ಇಂದಿಗೂ ಜನರ ಮನಸ್ಸಿನಲ್ಲಿಯೂ ಇದ್ದಾರೆಂದರೆ ಅವರ ವ್ಯಕ್ತಿತ್ವವೇ ಕಾರಣ. ಅಂಬೇಡ್ಕರ್ ಅವರಲ್ಲಿದ್ದ ಅಗಾಧವಾದ ಜ್ಞಾನದಿಂದಾಗಿ ಅವರು ಉನ್ನತ ಸ್ಥಾನ ಪಡೆದರು ಎಂದರು.

ಕರ್ನಾಟಕ  ಪುರಸಭಾ ಸದಸ್ಯ ಪ್ರಭಾಕರ್, ಪುರಸಭಾ ಇಂಜಿನಿಯರ್ ಸತ್ಯ, ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಜಿಲ್ಲಾ ಸಂಚಾಲಕ ರಾಘವೇಂದ್ರ ಉಪಸ್ಥಿತರಿದ್ದರು. ಸಮುದಾಯ ಕುಂದಾಪುರದ ಅಧ್ಯಕ್ಷ ಸದಾನಂದ ಬೈಂದೂರು ಸ್ವಾಗತಿಸಿದರು. ರವಿ ಕಟ್ಕರೆ ವಂದಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿದರು.

ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ  ಅಂಬೇಡ್ಕರ್ ಕುರಿತಾದ ಕ್ವಿಜ್, ಸಮೂಹ ಗಾಯನ,  ಚಿತ್ರ ರಚನೆ, ಅಂಬೇಡ್ಕರ್ ಕುರಿತ ಪೋಸ್ಟರ್ ರಚನೆ, ನಾಟಕಗಳು, ವಿಡಿಯೋ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ 34 ಶಾಲೆಗಳ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Similar News