‘ನಕಲಿ’ ವಿಷಯಗಳನ್ನು ಆನ್‌ಲೈನ್‌ ನಲ್ಲಿ ಹಾಕುವಂತಿಲ್ಲ: ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಹೊಸ ನಿಯಮ

Update: 2023-01-18 15:29 GMT

ಹೊಸದಿಲ್ಲಿ, ಜ. 18: ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಗಳು ಯವುದೇ ವಿಷಯವನ್ನು ‘ನಕಲಿ’ ಎಂಬುದಾಗಿ ತೀರ್ಮಾನಿಸಿದರೆ ಅದನ್ನು ಭಾರತದಲ್ಲಿ ಕಾರ್ಯಾಚರಿಸುತ್ತಿರುವ ವೆಬ್‌ಸೈಟ್‌(Website)ಗಳು ಪ್ರಸಾರಿಸುವಂತಿಲ್ಲ ಎಂಬ ಪ್ರಸ್ತಾವವೊಂದನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಮುಂದಿಟ್ಟಿದೆ. ಈ ವಿಷಯಕ್ಕೆ ಸಂಬಂಧಿಸಿ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ತಿದ್ದುಪಡಿ ತರಲು ಅದು ಮುಂದಾಗಿದೆ.

ಸಚಿವಾಲಯವು ಪ್ರಸ್ತಾವಿತ ತಿದ್ದುಪಡಿಯನ್ನು ಮಂಗಳವಾರ ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟಿದೆ.

ಮಾಹಿತಿ ತಂತ್ರಜ್ಞಾನ (ಇಂಟರ್ಮೀಡಿಯರಿ ಮಾರ್ಗದರ್ಶಿ ಸೂತ್ರಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳ ನಿಯಂತ್ರಣಕ್ಕೆ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳು, ಇಂಟರ್ನೆಟ್ ಸೇವೆ ಪೂರೈಕೆದಾರರು, ಆನ್ಲೈನ್ ಮಾರುಕಟ್ಟೆಗಳು ಹಾಗೂ ಸುದ್ದಿ ವೆಬ್‌ಸೈಟ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳನ್ನೊಳಗೊಂಡ ಡಿಜಿಟಲ್ ಮೀಡಿಯ ಪ್ರಸಾರಕರು ಒಳಪಡುತ್ತಾರೆ.

ಪತ್ರಿಕಾ ಮಾಹಿತಿ ಬ್ಯೂರೋ (PIB) ಅಥವಾ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಸಂಸ್ಥೆಯ ‘‘ವಾಸ್ತವಾಂಶ ಪರಿಶೀಲನಾ ಘಟಕವು’’ ನಕಲಿ ಎಂಬುದಾಗಿ ತೀರ್ಮಾನಿಸಿದ ಯಾವುದೇ ವಿಷಯವನ್ನು ವೆಬ್‌ಸೈಟ್‌ಗಳು ತೆಗೆದುಹಾಕುವುದನ್ನು ಕಡ್ಡಾಯಗೊಳಿಸುವ ತಿದ್ದುಪಡಿಯೊಂದನ್ನು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಂಗಳವಾರ ಸೂಚಿಸಿದೆ.

ಸರಕಾರವನ್ನು ಟೀಕಿಸುವ ಸುದ್ದಿಗಳನ್ನು ‘ನಕಲಿ’ ಎನ್ನುವ ಪಿಐಬಿ!

2019ರಲ್ಲಿ ಸ್ಥಾಪನೆಯಾಗಿರುವ ಪತ್ರಿಕಾ ಮಾಹಿತಿ ಬ್ಯೂರೋದ ವಾಸ್ತವಾಂಶ ಪರಿಶೀಲನಾ ಘಟಕವು, ವಾಸ್ತವಾಂಶಗಳನ್ನು ಪರಿಶೀಲಿಸುವ ಬದಲು ಸರಕಾರವನ್ನು ಟೀಕಿಸುವ ಸುದ್ದಿಗಳನ್ನು ‘ನಕಲಿ’ ಎಂಬುದಾಗಿ ಬಿಂಬಿಸುತ್ತಿದೆ ಎಂಬ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ.

ಪ್ರಧಾನಿ ನರೇಂದ್ರ ಮೋದಿ ಕೊರೋನ ವೈರಸ್ ಲಾಕ್ಡೌನ್ ಘೋಷಿಸಿದ ಹಿಂದಿನ ವಾರದಲ್ಲಿ, ಕೋವಿಡ್ -19 ಕುರಿತ ರಾಷ್ಟ್ರೀಯ ಕಾರ್ಯಪಡೆಯು ಒಂದು ಬಾರಿಯೂ ಸಭೆ ಸೇರಿಲ್ಲ ಎಂಬುದಾಗಿ ‘ಕ್ಯಾರವಾನ್’ ಪತ್ರಿಕೆಯು 2020 ಎಪ್ರಿಲ್ನಲ್ಲಿ ಆರೋಪಿಸಿತ್ತು. ಆದರೆ, ವಾಸ್ತವಾಂಶ ತನಿಖಾ ಘಟಕವು ಈ ವರದಿಯನ್ನು ‘‘ಸುಳ್ಳು ಮತ್ತು ಆಧಾರರಹಿತ’’ ಎಂಬುದಾಗಿ ತೀರ್ಮಾನಿಸಿತ್ತು.

ಆಗ, ನಿಮ್ಮ ತೀರ್ಮಾನವನ್ನು ಸಮರ್ಥಿಸಲು ಕಾರ್ಯಪಡೆಯ ಸಭೆಯ ನಡಾವಳಿಗಳನ್ನು ಒದಗಿಸುವಂತೆ ‘ಕ್ಯಾರವಾನ್’ ವರದಿಗಾರ್ತಿ ವಿದ್ಯಾ ಕೃಷ್ಣನ್ ಪಿಐಬಿಯನ್ನು ಕೋರಿದ್ದರು. ಆದರೆ, ನನಗೆ ಆ ನಡಾವಳಿಗಳು ಈವರಗೆ ಬಂದಿಲ್ಲ ಎಂಬುದಾಗಿ ಅವರು ಬಳಿಕ ‘ನ್ಯೂಸ್ಲಾಂಡ್ರಿ’ಗೆ ಹೇಳಿದ್ದಾರೆ.

Similar News