ಜಮ್ಮು ಎನ್ಕೌಂಟರ್: ನ್ಯಾಯಾಂಗ ತನಿಖೆಗೆ ಜಮ್ಮುಕಾಶ್ಮೀರ ಸರಕಾರ ಆದೇಶ

Update: 2023-01-18 16:03 GMT

ಜಮ್ಮು,ಜ.17: ಜಮ್ಮುಕಾಶ್ಮೀರದ ಸಿಧ್ರಾ ಪ್ರದೇಶದಲ್ಲಿ ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ನಾಲ್ವರು ಉಗ್ರಗಾಮಿಗಳು ಸಾವನ್ನಪ್ಪಿದ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆ ನಡೆಸಬೇಕೆಂದು ಜಮ್ಮುಕಾಶ್ಮೀರ ಸರಕಾರವು ಬುಧವಾರ ಆದೇಶ ನೀಡಿದೆ.

ಜಮ್ಮುವಿನ ಸಹಾಯಕ ಆಯುಕ್ತ ಪಿಯೂಶ್ ಧೋತ್ರಾ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆಯೆಂದು ಕೆಎನ್ಓ ಸುದ್ದಿಸಂಸ್ಥೆ ವರದಿ ಮಾಡಿದೆ.

ಡಿಸೆಂಬರ್ 28ರಂದು ಸಿಧ್ರಾದಲ್ಲಿರುವ ಪೊಲೀಸ್ ತಪಾಸಣಾ ಠಾಣೆಯ ಬಳಿ ಎನ್ಕೌಂಟರ್ ನಡೆದಿತ್ತು. ಟ್ರಕ್ ಒಂದರಲ್ಲಿ ಪ್ರಯಾಣಿಸುತ್ತಿದ್ದ ಉಗ್ರಗಾಮಿಗಳನ್ನು ಪೊಲೀಸರು ತಡೆದಿದ್ದರು. ಆಗ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಉಗ್ರಗಾಮಿಗಳು ಸ್ಥಳದಲ್ಲೇ ಹತರಾಗಿದ್ದರು. ಅವರಿಂದ ಭಾರೀ ಪ್ರಮಾಣದ ಶಾಸ್ತ್ರಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ತನಿಖಾ ವರದಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಅವರಿಗೆ ಸಲ್ಲಿಸುವಂತೆ ತನಗೆ ಸೂಚಿಸಲಾಗಿದೆ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗವು ಜಾರಿಗೊಳಿಸಿದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿ ಈ ತನಿಖೆಗೆ ಆದೇಶಿಸಲಾಗಿದೆ ಎಂದು ಪಿಯೂಶ್ ಧೋತ್ರಾ ತಿಳಿಸಿದ್ದಾರೆ.

ಸಿಧ್ರಾ ಎನ್ಕೌಂಟರ್ ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಹೊಂದಿರುವವರು ಜನವರಿ 21ರೊಳಗೆ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ ಹೇಳಿಕೆಯನ್ನು ದಾಖಲಿಸಬೇಕೆಂದು ಅವರು ಸೂಚಿಸಿದ್ದಾರೆ.

Similar News