ವಿಶ್ವಮಟ್ಟದಲ್ಲೀಗ ‘ನಾಟು ನಾಟು’ ಸದ್ದು

Update: 2023-01-19 05:25 GMT

ರಾಜಮೌಳಿ ನಿರ್ದೇಶನದ ಬ್ಲಾಕ್ ಬಸ್ಟರ್ ‘ಆರ್‌ಆರ್‌ಆರ್’ ಚಿತ್ರದ ಪ್ರಸಿದ್ಧ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿಯವರ ಸಂಗೀತ ನಿರ್ದೇಶನದ ಈ ಹಾಡಿಗೆ ಜಾಗತಿಕ ಮನ್ನಣೆ ಸಿಕ್ಕಿದೆ. ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ಮೊದಲ ಏಶ್ಯನ್ ಹಾಡು ಎನ್ನುವ ಹೆಗ್ಗಳಿಕೆ ಬೆನ್ನಲ್ಲೇ ಕೀರವಾಣಿಯವರಿಗೆ ಉತ್ತಮ ಸಂಗೀತಕ್ಕಾಗಿ ಲಾಸ್ ಏಂಜಲೀಸ್ ಫಿಲ್ಮ್ ಕ್ರಿಟಿಕ್ ಅಸೋಸಿಯೇಷನ್‌ನ ಪ್ರಶಸ್ತಿ ಬಂದಿದೆ. ಇಡೀ ದೇಶ ಅಭಿಮಾನಪಡುವ ಸಂಗೀತ ನಿರ್ದೇಶಕ ಕೀರವಾಣಿ, ಈ ಸಂದರ್ಭದಲ್ಲಿ ಭಾವುಕರಾಗಿದ್ದಾರೆ ಮತ್ತು ಅಮೆರಿಕನ್ ಸಂಗೀತ ನಿರ್ದೇಶಕ ಜಾನ್ ವಿಲಿಯಮ್ಸ್ ಹಾಗೂ ದಿಗ್ಗಜ ಗಾಯಕ ನುಸ್ರತ್ ಫತೇ ಅಲಿ ಖಾನ್ ಅವರನ್ನು ಸ್ಮರಿಸಿದ್ದಾರೆ. ‘ನಾಟು ನಾಟು’ ಮೂಲಕ ಕೀರವಾಣಿಯವರೀಗ ವಿಶ್ವದ ಮುಂಚೂಣಿ ಸಂಗೀತ ನಿರ್ದೇಶಕರ ಸಾಲಿನಲ್ಲಿದ್ದಾರೆ. ಪ್ರಧಾನಿ ಮೋದಿ, ನಟ ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲರಿಂದಲೂ ಕೀರವಾಣಿಯವರಿಗೆ ಅಭಿನಂದನೆಗಳ ಮಹಾಪೂರ. ಭಾರತೀಯ ಚಿತ್ರರಂಗದ ಪಾಲಿಗೆ ಇದು ಅತಿ ಮಧುರ ಕ್ಷಣ.

ಗೋಲ್ಡನ್ ಗ್ಲೋಬ್ ಗೆದ್ದ ‘ನಾಟು ನಾಟು’ ಹಾಡಿಗೆ ಕೀರವಾಣಿ ಸಂಗೀತ ನೀಡಿದ್ದರೆ ರಾಹುಲ್ ಸಿಪ್ಲಿಗಂಜ್ ಹಾಗೂ ಕೀರವಾಣಿಯವರ ಪುತ್ರ ಕಲಾಭೈರವ ಹಾಡಿದ್ದಾರೆ. ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಹೆಜ್ಜೆ ಹಾಕಿದ್ದಾರೆ. ಕೊಡುರಿ ಮರಾಕಥಮಣಿ ಕೀರವಾಣಿ ದಕ್ಷಿಣ ಭಾರತದ ಬಹು ಬೇಡಿಕೆಯ ಸಂಗೀತ ನಿರ್ದೇಶಕ. ಹಿಂದಿ ಚಿತ್ರರಂಗದಲ್ಲಿ ಎಂ.ಎಂ. ಕ್ರೀಮ್ ಎಂದೇ ಚಿರಪರಿಚಿತ. ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಕೊವೂರಿನ ತೆಲುಗು ಕುಟುಂಬದಲ್ಲಿ 1961ರ ಜುಲೈ 4ರಂದು ಜನನ. ಚಿತ್ರ ಸಾಹಿತಿ ಕೊಡೂರಿ ಶಿವಶಕ್ತಿ ದತ್ತ ಇವರ ತಂದೆ. ಸಂಗೀತ ನಿರ್ದೇಶಕ ಮತ್ತು ಗಾಯಕ ಕಲ್ಯಾಣಿ ಮಲಿಕ್ ಇವರ ಸಹೋದರರಲ್ಲೊಬ್ಬರು. ನಿರ್ದೇಶಕ ಎಸ್.ಎಸ್. ರಾಜಮೌಳಿ ಮತ್ತು ಸಂಗೀತ ನಿರ್ದೇಶಕ, ಗಾಯಕ ಎಂ.ಎಂ. ಶ್ರೀಲೇಖ ಇವರ ಸೋದರ ಸಂಬಂಧಿ.

1987ರಲ್ಲಿ ಖ್ಯಾತ ಸಂಗೀತ ಸಂಯೋಜಕ ಕೆ. ಚಕ್ರವರ್ತಿಯವರಿಗೆ ಸಹಾಯಕ ಸಂಗೀತ ನಿರ್ದೇಶಕನಾಗಿ ಕೀರವಾಣಿಯವರು ಈ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಿಟ್ಟರು. 1990ರಲ್ಲಿ ಕಲ್ಕಿ ಚಿತ್ರದಲ್ಲಿ ಕೀರವಾಣಿಯವರಿಗೆ ಮೊದಲ ದೊಡ್ಡ ಅವಕಾಶ ಒದಗಿಬಂತಾದರೂ, ಆ ಚಿತ್ರ ಬಿಡುಗಡೆಯಾಗಲಿಲ್ಲ. ಹಾಗಾಗಿ, ನಿರ್ದೇಶಕ ಮೌಳಿ ಅವರ 1990ರ ಚಿತ್ರ ‘ಮನಸು ಮಮಥಾ’ವನ್ನೇ ಕೀರವಾಣಿ ಸಂಗೀತ ನಿರ್ದೇಶನದ ಮೊದಲ ಚಿತ್ರವೆಂದು ಪರಿಗಣಿಸಲಾಗುತ್ತದೆ. ಬಳಿಕ 1991ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ‘ಕ್ಷಣ ಕ್ಷಣಂ’ ಚಿತ್ರಕ್ಕೆ ಕೀರವಾಣಿ ಸಂಗೀತ ನಿರ್ದೇಶನ ಮಾಡಿದರು. ಎಲ್ಲ ಚಿತ್ರಗಳಲ್ಲೂ ಕೀರವಾಣಿಯವರ ಸಂಗೀತ ಗೆದ್ದಿತ್ತು. ರಾಜಮೌಳಿಯವರ ಎಲ್ಲ ಚಿತ್ರಗಳಿಗೂ ಕೀರವಾಣಿಯವರದೇ ಸಂಗೀತ. ವಿವಿಧ ಭಾರತೀಯ ಭಾಷೆಗಳಲ್ಲಿ 220ಕ್ಕಿಂತ ಹೆಚ್ಚು ಚಲನಚಿತ್ರಗಳಿಗೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಕೀರವಾಣಿಯವರು ಪ್ರತೀ ಚಿತ್ರಕ್ಕೆ ಪಡೆಯುವ ಸಂಭಾವನೆ 18 ಕೋಟಿ ಎಂದು ಹೇಳಲಾಗುತ್ತದೆ.

ಕ್ರಮೇಣ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಎಲ್ಲ ಭಾಷೆಗಳ ಸಿನೆಮಾಗಳಿಗೂ ಕೀರವಾಣಿಯವರ ಸಂಗೀತ ಮುಖ್ಯವಾಗತೊಡಗಿತು. ಬಾಲಿವುಡ್ ಕಡೆಗೂ ಅವರ ಸಂಗೀತ ಯಾನ ಸಾಗಿತು. ಅವರ ಸಂಗೀತ ನಿರ್ದೇಶನದ ಮೊದಲ ಪ್ರಮುಖ ಹಿಂದಿ ಚಿತ್ರ ‘ಕ್ರಿಮಿನಲ್’.

1997ರಲ್ಲಿ ‘ಅನ್ನಮಯ್ಯ’ ಎಂಬ ತೆಲುಗು ಚಿತ್ರದಲ್ಲಿನ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು. ಅಲ್ಲದೆ, 8 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ, 11 ಬಾರಿ ಆಂಧ್ರ ಪ್ರದೇಶ ಸರಕಾರದ ನಂದಿ ಅವಾರ್ಡ್ ಪಡೆದಿದ್ದಾರೆ. ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಗೆದ್ದಿದ್ದಾರೆ.

ಕನ್ನಡದ ‘ಅಳಿಮಯ್ಯ’, ‘ಅಪ್ಪಾಜಿ’, ‘ಭೈರವ’, ‘ಸ್ವಾತಿ’, ‘ಕರ್ನಾಟಕ ಸುಪುತ್ರ’, ‘ದೀಪಾವಳಿ’, ‘ಜಮೀನ್ದಾರ್ರು’ ಮುಂತಾದ ಸಿನೆಮಾಗಳಿಗೆ ಕೀರವಾಣಿಯವರದೇ ಸಂಗೀತ. ತೆಲುಗಿನಿಂದ ರಿಮೇಕ್ ಆದ ‘ಮರ್ಯಾದೆ ರಾಮಣ್ಣ’ ಹಾಗೂ ‘ವೀರ ಮದಕರಿ’ ಚಿತ್ರದ ಹಾಡುಗಳಿಗೂ ಕೀರವಾಣಿ ಸಂಗೀತವಿದೆ.

‘ಈಸ್ ರಾತ್ ಕಿ ಸುಬಹ್ ನಹಿ’, ‘ಸುರ್ -ದಿ ಮೆಲೊಡಿ ಆಫ್ ಲೈಫ್’, ‘ಝಖಂ’, ‘ಸಾಯಾ’, ‘ಜಿಸ್ಮ್’, ‘ಕ್ರಿಮಿನಲ್’, ‘ರೋಗ್’ ಮತ್ತು ‘ಪಹೇಲಿ’ ಮೊದಲಾದ ಜನಪ್ರಿಯ ಹಿಂದಿ ಚಿತ್ರಗಳಿಗೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಮಲಯಾಳಂನಲ್ಲಿ ‘ನೀಲಗಿರಿ’, ‘ಸೂರ್ಯ’ ‘ಮನಸ್ಸು’ ಮತ್ತು ‘ದೇವರಾಗಮ್’ ಮುಂತಾದ ಚಿತ್ರಗಳು ಕೀರವಾಣಿಯವರ ಸಂಗೀತದಿಂದ ವಿಜೃಂಭಿಸಿವೆ. ಕ್ರಿಮಿನಲ್ ಚಿತ್ರದಲ್ಲಿನ ‘‘ತು ಮಿಲೆ ದಿಲ್ ಖಿಲೆ’’, ಸುರ್ ಚಿತ್ರದ ‘‘ಆ ಭಿ ಜಾ’’, ತೆಲುಗಿನ ‘ಈಗ’ ಸಿನೆಮಾದ ‘‘ನೇನೇ ನಾನಿ’’, ಜಿಸ್ಮ್ ಚಿತ್ರದ ‘‘ಜಾದೂ ಹೈ ನಶಾ’’, ಬಾಹುಬಲಿ ಮೊದಲ ಸೀಕ್ವೆನ್ಸ್‌ನ ‘‘ದೀವಾರಾ’’, ಝಖಂ ಚಿತ್ರದ ‘‘ಗಲೀ ಮೆ ಆಜ್ ಚಾಂದ್’’, ತೆಲುಗಿನ ಮಗಧೀರ ಚಿತ್ರದ ‘‘ಧೀರ ಧೀರ’’, ರೋಗ್ ಚಿತ್ರದ ‘‘ಮೈನೆ ದಿಲ್ ಸೆ ಕಹಾ’’, ಪಹೇಲಿ ಚಿತ್ರದ ‘‘ಧೀರೇ ಜಲ್ನಾ’’, ಈಸ್ ರಾತ್ ಕಿ ಸುಬಹ್ ನಹಿ ಚಿತ್ರದ ‘‘ಚುಪ್ ತುಮ್ ರಹೋ’’ ಮೊದಲಾದ ಹಾಡುಗಳು ಕೀರವಾಣಿಯವರ ಸಂಗೀತ ನಿರ್ದೇಶನದ ಅತ್ಯಂತ ಜನಪ್ರಿಯ ಗೀತೆಗಳಾಗಿವೆ.

Similar News