ಘೋರ ಅಪರಾಧ: ಲಖಿಂಪುರ ಖೇರಿ ಪ್ರಕರಣದ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ವಿರೋಧಿಸಿದ ಉತ್ತರ ಪ್ರದೇಶ ಸರಕಾರ

Update: 2023-01-19 08:48 GMT

ಹೊಸದಿಲ್ಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ  ಕೇಂದ್ರ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಉತ್ತರ ಪ್ರದೇಶ ಸರಕಾರ ಗುರುವಾರ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಉತ್ತರ ಪ್ರದೇಶದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಅವರು ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ  ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಅವರ ಪೀಠಕ್ಕೆ "ಅಪರಾಧವು ಗಂಭೀರವಾಗಿದೆ" ಎಂದು ಹೇಳಿದರು.

"ಇದು ಘೋರ ಅಪರಾಧ ಹಾಗೂ  ಸಮಾಜಕ್ಕೆ ತಪ್ಪು ಸಂಕೇತವನ್ನು ನೀಡುತ್ತದೆ" ಎಂದು ಅವರು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಜಾಮೀನು ನಿರಾಕರಿಸಿದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಆಶಿಶ್ ಮಿಶ್ರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಂತರ ಕಾಯ್ದಿರಿಸಿತ್ತು.

ಅಕ್ಟೋಬರ್ 3, 2021 ರಂದು ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದರು, ಆಗ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ರೈತರು ಪ್ರತಿಭಟಿಸಿದಾಗ ಹಿಂಸಾಚಾರ  ಭುಗಿಲೆದ್ದಿತ್ತು.

ಉತ್ತರ ಪ್ರದೇಶ ಪೊಲೀಸ್ ಎಫ್‌ಐಆರ್ ಪ್ರಕಾರ, ಆಶಿಶ್ ಮಿಶ್ರಾ ಕುಳಿತಿದ್ದ ಎಸ್‌ಯುವಿ ಹರಿದು  ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಘಟನೆಯ ನಂತರ, ಉದ್ರಿಕ್ತಗೊಂಡ ರೈತರು ಚಾಲಕ ಹಾಗೂ  ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿ ಕೊಂದಿದ್ದರು. . ಹಿಂಸಾಚಾರದಲ್ಲಿ ಒಬ್ಬ ಪತ್ರಕರ್ತನೂ ಸಾವನ್ನಪ್ಪಿದ್ದಾನೆ.

Similar News