ಕಥುವಾ ಅತ್ಯಾಚಾರಿಗಳನ್ನು ಬೆಂಬಲಿಸಿ ಮೆರವಣಿಗೆ ನಡೆಸಿದ್ದ ವ್ಯಕ್ತಿಯಿಂದ ಭಾರತ್‌ ಜೋಡೋ ಯಾತ್ರೆಗೆ ಬೆಂಬಲ

ಸಾಮಾಜಿಕ ಜಾಲತಾಣದಾದ್ಯಂತ ಆಕ್ರೋಶ

Update: 2023-01-20 05:21 GMT

ಹೊಸದಿಲ್ಲಿ: ಭಾರತ್‌ ಜೋಡೊ ಯಾತ್ರೆ ಇಂದು ಜಮ್ಮು ಪ್ರವೇಶಿಸಲಿದೆ. ಈ ಯಾತ್ರೆಯಲ್ಲಿ ಹಲವಾರು ಪಕ್ಷಗಳು ಭಾಗವಹಿಸುವ ಸಾಧ್ಯತೆಯಿವೆ. ಈ ನಡುವೆ ಯಾತ್ರೆಯಲ್ಲಿ ಚೌಧರಿ ಲಾಲ್‌ ಸಿಂಗ್‌ ಎಂಬಾತನೂ ಭಾಗವಹಿಸಲಿದ್ದು, ರಾಹುಲ್‌ ಗಾಂಧಿಯವರ ಜೊತೆಗೆ ವೇದಿಕೆ ಹಂಚಿಕೊಳ್ಳಲಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿತ್ತು. ಈ ಕುರಿತು ಇದೀಗ ಸಾಮಾಜಿಕ ತಾಣದಲ್ಲಿ ಆಕ್ರೋಶವೂ ಕೇಳಿ ಬರುತ್ತಿದೆ. 

ಚೌಧರಿ ಲಾಲ್ ಸಿಂಗ್ ಎಂಬ ವ್ಯಕ್ತಿ  ಯಾರು?

2018 ರಲ್ಲಿ ಜಮ್ಮುವಿನ ಕಥುವಾ ಎಂಬ ಗ್ರಾಮದಲ್ಲಿ ಎಂಟು ವರ್ಷದ ಮಗುವಿನ ಮೇಲೆ ದೇವಸ್ಥಾನದ ಪೂಜಾರಿಯೂ ಒಳಗೊಂಡಂತೆ ಹಲವರು ಸತತ ಎಂಟು ದಿನಗಳ ಕಾಲ ಅತ್ಯಾಚಾರ ಮಾಡಿ ಕೊಲೆಗೈದಿದ್ದರು. ಈ ವೇಳೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಸರ್ಭದಲ್ಲಿ ಚೌಧರಿ ಲಾಲ್‌ ಸಿಂಗ್‌ ಎಂಬಾತ ಅತ್ಯಾಚಾರಿಗಳ ಪರವಾಗಿ ಮೆರವಣಿಗೆ ನಡೆಸಿದ್ದು ಮಾತ್ರವಲ್ಲದೇ, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ವಿಚಾರಣೆ ನಡೆಯದಂತೆ ಅಡ್ಡಿಪಡಿಸಿದ್ದ ಹಾಗೂ ಸಂತ್ರಸ್ತರ ಪರವಾದ ವಕೀಲರಿಗೆ ಬೆದರಿಕೆ ಹಾಕಿದ್ದ.

2014 ಕ್ಕೆ ಮುಂಚೆ ಕಾಂಗ್ರೆಸ್ಸಿನಲ್ಲಿದ್ದ ಈ ವ್ಯಕ್ತಿ, 2014 ರಲ್ಲಿ ಬಿಜೆಪಿ ಸೇರಿ ಬಿಜೆಪಿ--ಪಿಡಿಪಿ ಕೂಟ ಜಮ್ಮು-ಕಾಶ್ಮೀರದಲ್ಲಿ ಅಧಿಕಾರಕ್ಕೆ ಬಂದಾಗ  ಮಂತ್ರಿಯಾಗಿದ್ದ. 2018ರಲ್ಲಿ ಇಡೀ ಜಮ್ಮು ಪ್ರಾಂತ್ಯದಲ್ಲಿ ಕೋಮು ದ್ವೇಷದ ಜ್ವಾಲೆ ಹರಡುವಲ್ಲಿ ಈತನ ಪಾತ್ರ ಅಧಿಕವಾಗಿತ್ತು ಮತ್ತು ಅದರ ಭಾಗವಾಗಿಯೇ ಕಥುವಾ ಪ್ರಕರಣದಲ್ಲೂ ದೇಶಭಕ್ತಿ ಮತ್ತು ಹಿಂದುತ್ವದ ಹೆಸರಿನಲ್ಲಿ ಕೊಲೆಗಡುಕರ ಪರವಾಗಿ ಮೆರವಣಿಗೆ ಮಾಡಿದ್ದ. 2019 ರಲ್ಲಿ ಸಂಸತ್ ಚುನಾವಣೆಯಲ್ಲಿ  ಬಿಜೆಪಿ ಟಿಕೆಟ್  ಕೊಡಲಿಲ್ಲವೆಂದು ಹೊರಬಿದ್ದ ಈ ಚೌಧರಿ  ಡೋಗ್ರಾ ಸ್ವಾಭಿಮಾನ ಸಂಘಟನೆ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು  ರಾಜಕಾರಣ ಮುಂದುವರೆಸಿದ್ದಾನೆ. ಸದ್ಯ ಭಾರತ್‌ ಜೋಡೊ ಯಾತ್ರೆಗೆ ಹರಿದು ಬರುತ್ತಿರುವ ಬೆಂಬಲವನ್ನು ಕಂಡು ಜೋಡೊದಲ್ಲಿ ನಡೆಯುವುದಾಗಿ ಈತ ತಿಳಿಸಿದ್ದಾನೆ. ಈತ ಭಾಗವಹಿಸುತ್ತಿರುವುದನ್ನು ಅಲ್ಲಿನ ಸಂಘಟಕರು ಕೂಡಾ ಖಚಿತಪಡಿಸಿದ್ದಾರೆ. 

ಭಾರತ್ ಜೋಡೋ ಯಾತ್ರೆಯಲ್ಲಿ ಈತ ಭಾಗವಹಿಸುತ್ತಿರುವುದನ್ನು ವಿರೋಧಿಸಿ  ಕಥುವಾ ಸಂತ್ರಸ್ತರ ಪರವಾಗಿ ವಾದ ಮಾಡಿದ್ದ ವಕೀಲೆ ಮತ್ತು ಕಾಂಗ್ರೆಸ್ ಪಕ್ಷದ ವಕ್ತಾರೆಯೂ ಆಗಿರುವ ದೀಪಕ್ ಪುಷ್ಕರ್ ನಾಥ್ ಅವರು ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದಾರೆ. ಹಲವಾರು ಮಂದಿ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿಯೂ ಈತ ಜೋಡೋದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಇದನ್ನೂ ಓದಿ: 

Similar News