×
Ad

ʼಇದು ಕ್ರೀಡಾಪಟುಗಳ ಪ್ರತಿಭಟನೆ, ವೇದಿಕೆಯಿಂದ ಕೆಳಗಿಳಿಯಿರಿʼ: ಬೃಂದಾ ಕಾರಟ್‌ಗೆ ಧರಣಿ ನಿರತ ಕುಸ್ತಿಪಟುಗಳ ಮನವಿ

ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ, ತರಬೇತುದಾರರ ವಿರುದ್ಧ ಎರಡನೇ ದಿನಕ್ಕೆ ಕಾಲಿಟ್ಟ ಕುಸ್ತಿಪಟುಗಳ ಹೋರಾಟ

Update: 2023-01-19 18:00 IST

ಹೊಸದಿಲ್ಲಿ:  ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಸಂಸದ ಮತ್ತು ಹಲವಾರು ತರಬೇತುದಾರರ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ವೇದಿಕೆಯಿಂದ ಕೆಳಗಿಳಿಯುವಂತೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ನಾಯಕಿ ಬೃಂದಾ ಕಾರಟ್ ಅವರನ್ನು ಪ್ರತಿಭಟನಾಕಾರರು ಮನವಿ ಮಾಡಿದ್ದಾರೆ. ದಿಲ್ಲಿಯ ಜಂತರ್‌ ಮಂತರ್‌ನಲ್ಲಿ ಮಹಿಳಾ ಆಟಗಾರ್ತಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳದ ವಿರುದ್ಧ ಸುಮಾರು 200 ಕ್ಕೂ ಅಧಿಕ ಕುಸ್ತಿಪಟುಗಳು ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 

ಪ್ರತಿಭಟನಾಕಾರರಿಗೆ ಬೆಂಬಲವಾಗಿ ಬಂದ ಬೃಂದಾ ಕಾರಟ್‌ ಅವರನ್ನು ವೇದಿಕೆಯಿಂದ ಇಳಿಯುವಂತೆ ಪ್ರತಿಭಟನಾ ನಿರತ ಕ್ರೀಡಾಪಟುಗಳು ಮನವಿ ಮಾಡಿದ್ದಾರೆ. 

“ದಯವಿಟ್ಟು ಕೆಳಗಿಳಿಯಿರಿ... ಮೇಡಂ, ದಯವಿಟ್ಟು ಇದನ್ನು ರಾಜಕೀಯ ಮಾಡಬೇಡಿ. ಇದು ಕ್ರೀಡಾಪಟುಗಳ ಪ್ರತಿಭಟನೆ" ಎಂದು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಅವರು ಸ್ಥಳಕ್ಕೆ ಆಗಮಿಸಿದ ಕಾರಟ್‌ಗೆ ಬಳಿ ಹೇಳಿದ್ದಾರೆ.  

ಆ ಬಳಿಕ ಎನ್‌ಡಿಟಿವಿಯೊಂದಿಗೆ ಮಾತನಾಡಿದ ಬೃಂದಾ ಕಾರಟ್, "ನಾವು ಲೈಂಗಿಕ ಕಿರುಕುಳದ ವಿರುದ್ಧದ ಯಾವುದೇ ರೀತಿಯ  ಹೋರಾಟದಲ್ಲಿದ್ದೇವೆ, ಯಾವುದೇ ವರ್ಗದ ಮಹಿಳೆಯರನ್ನು ಅವಮಾನಿಸುವ ಯಾವುದೇ ವಿಷಯದ ವಿರುದ್ಧ ನಾವು ಹೋರಾಡುತ್ತೇವೆ.  ಸರ್ಕಾರವು ಬಲವಾದ ಕ್ರಮ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ." ಎಂದು ಹೇಳಿದ್ದಾರೆ. 

"ಅವರು (ಕುಸ್ತಿಪಟುಗಳು) ಇಲ್ಲಿಗೆ ಬಂದು ಧರಣಿ ಕುಳಿತಿರುವುದು ಅತ್ಯಂತ ದುರದೃಷ್ಟಕರವಾಗಿದೆ.  ಸರ್ಕಾರವು ಯಾವುದೇ ಮಹಿಳೆಯ ಯಾವುದೇ ದೂರಿನ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ವಿಚಾರಣೆಯು ತೀರ್ಮಾನಕ್ಕೆ ಬರುವವರೆಗೆ, ಆರೋಪಿತ ವ್ಯಕ್ತಿಯನ್ನು ಹುದ್ದೆಯಿಂದ ತೆಗೆಯಬೇಕು,’’ ಎಂದು ಹೇಳಿದರು.

Similar News