×
Ad

ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿ’ಗೆ ಕೋರ್ಟ್ ನಿಂದ ತಡೆಯಾಜ್ಞೆ

Update: 2023-01-19 18:47 IST

ಬೆಂಗಳೂರು, ಜ.19: ನಟಿ ರಮ್ಯಾ (Ramya/Divya Spandana) ಹಾಗೂ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಸಹಯೋಗದಲ್ಲಿ ನಿರ್ಮಾಣವಾಗಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಚಿತ್ರದ ಶೀರ್ಷಿಕೆಗೆ ನಗರದ ಹೆಚ್ಚುವರಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. 

ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಅವರು ಆಕ್ಷೇಪ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಿದ ನ್ಯಾಯಪೀಠವು ಈ ಆದೇಶ ನೀಡಿದೆ. 

ರಾಜೇಂದ್ರಸಿಂಗ್ ಬಾಬು ಅವರು ಮಂಡಳಿಯಲ್ಲಿ ಈಗಾಗಲೇ ತಾವು ನಿರ್ಮಾಣ ಮಾಡುತ್ತಿರುವ ಕನ್ನಡ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಎಂಬ ಶೀರ್ಷಿಕೆ ನೋಂದಣಿ ಮಾಡಿದ್ದಾರೆ. ಈ ಚಲನಚಿತ್ರದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದರು. 

ಅಂಬರೀಶ್ ಅವರ ನಿಧನದಿಂದ ಚಿತ್ರದ ಚಿತ್ರೀಕರಣವು ಸ್ಥಗಿತವಾಗಿತ್ತು. ಈಗಾಗಲೇ ಶೇ.90ರಷ್ಟು ಭಾಗ ಚಿತ್ರೀಕರಣ ಮುಗಿದಿದೆ. ಈ ಶೀರ್ಷಿಕೆಯು ರಾಜೇಂದ್ರಸಿಂಗ್ ಬಾಬು ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನ ಶೀರ್ಷಿಕೆಯಾಗಿದೆ. ಈ ಶೀರ್ಷಿಕೆಯನ್ನು ಬಳಸಲು ಬೇರೆ ಅವರಿಗೆ ಹಕ್ಕು ಇರುವುದಿಲ್ಲ. ಹೀಗೆ ಮಾಡಿದಲ್ಲಿ ಶೀರ್ಷಿಕೆಯ ಕೃತಿಚೌರ್ಯವಾಗುತ್ತದೆ. ಹೀಗಾಗಿ ಈ ಶೀರ್ಷಿಕೆಯ ಹೆಸರನ್ನು ಕೊಡಬಾರದು’ ಎಂದು ರಾಜೇಂದ್ರ ಸಿಂಗ್ ಬಾಬು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. 

ನಟಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋ ಮತ್ತು ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಚಲನಚಿತ್ರವು ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ: ತೇಜಸ್ವಿ ಸೂರ್ಯ ಬುದ್ಧಿವಂತ, ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದಿಲ್ಲ: ಅಣ್ಣಾಮಲೈ

Similar News