ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ರಾಜಕೀಯದೊಂದಿಗೆ ವ್ಯವಹರಿಸುವುದು ದೊಡ್ಡ ಸವಾಲಾಗಿತ್ತು: ಫೈಝರ್

ದಾವೋಸ್ 2023 ಶೃಂಗಸಭೆ

Update: 2023-01-20 08:47 GMT

ದಾವೋಸ್: ಕೊರೊನಾ ಸಾಂಕ್ರಾಮಿಕ ಕಾಲಘಟ್ಟದಲ್ಲಿ ರಾಜಕೀಯದೊಂದಿಗೆ ವ್ಯವಹರಿಸುವುದು ನಮ್ಮ ಕಂಪನಿಯೂ ಸೇರಿದಂತೆ ಹಲವಾರು ಲಸಿಕೆ ತಯಾರಿಕಾ ಕಂಪನಿಗಳ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು ಎಂದು ಪೈಝರ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಬೌರ್ಲಾ ಅಭಿಪ್ರಾಯ ಪಟ್ಟಿದ್ದಾರೆ ಎಂದು thehindu.com ವರದಿ ಮಾಡಿದೆ.

ದಾವೋಸ್‌ನಲ್ಲಿ ಆಯೋಜನೆಗೊಂಡಿರುವ ಜಾಗತಿಕ ಆರ್ಥಿಕ ವೇದಿಕೆ ಶೃಂಗಸಭೆಯ ಸಾಂಕ್ರಾಮಿಕ ಸನ್ನದ್ಧತೆ ಸಮಿತಿಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ಮುಖಗವಸು ಧರಿಸುವುದು, ಲಸಿಕೆಯ ದಕ್ಷತೆ ಅಥವಾ ಲಸಿಕೆ ಪೂರೈಕೆ ಕುರಿತ ಪ್ರಶ್ನೆಗಳೆಲ್ಲವನ್ನೂ ರಾಜಕೀಕರಣಗೊಳಿಸಲಾಗಿತ್ತು ಮತ್ತು ಅವು ಲಸಿಕೆ ತಯಾರಿಕರ ಪಾಲಿಗೆ ನಿರಂತರ ತೊಡಕಾಗಿದ್ದವು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ, ರಾಜಕೀಯ ಸವಾಲು ನಿಜಕ್ಕೂ ದೊಡ್ಡ ಸವಾಲು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಸರ್ಕಾರಗಳ ಭಯದಿಂದ ಉದ್ಭವಿಸಿದ ರಕ್ಷಣಾತ್ಮಕ ಕ್ರಮಗಳ ಕಾರಣಕ್ಕೆ ಗಡಿಗಳನ್ನು ಮುಚ್ಚಿದ್ದರಿಂದಾಗಿ ಲಸಿಕೆಗಳನ್ನು ರಫ್ತು ಮಾಡಲು ಮತ್ತು ಲಸಿಕೆ ತಯಾರಿಕೆಗೆ ಅವಶ್ಯಕವಾದ ಕಚ್ಚಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದು ಕ್ಲಿಷ್ಟಕರವಾಗಿ ಪರಿಣಮಿಸಿತು ಎಂದು ಅವರು ತಿಳಿಸಿದ್ದಾರೆ.

ತಮ್ಮ ಪ್ರಜೆಗಳಿಗೆ ಲಸಿಕೆ ನೀಡಲು ಸರ್ಕಾರದ ನಾಯಕರು ಮಾಡುವ ಕ್ಷಮಿಸಬಹುದಾದ ರಾಜಕೀಯ ಹಾಗೂ ಚುನಾವಣಾ ಸಮಯದಲ್ಲಿ ಸಾರ್ವಜನಿಕ ಆರೋಗ್ಯವನ್ನು ರಾಜಕೀಕರಣಗೊಳಿಸುವ ಕ್ಷಮಿಸಲಾಗದ ರಾಜಕೀಯದ ನಡುವಿನ ವ್ಯತ್ಯಾಸದ ಕುರಿತು ಬ್ರಿಟನ್‌ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ವಿಶ್ಲೇಷಿಸಿದ್ದಾರೆ.

ಮುಖಗವಸು ಧರಿಸುವುದನ್ನು ರಾಜಕೀಯ ವಿಷಯವಾಗಿಸುವುದು ಕ್ಷಮಿಸಲಾಗದ ಮತ್ತು ಮೂರ್ಖತನದ ರಾಜಕೀಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಹುತೇಕ ದೇಶಗಳಲ್ಲಿ ಕೊರೊನಾ ವೈರಸ್ ಹಿಂಬಾಗಿಲ ಮೂಲಕ ಪ್ರವೇಶಿಸಿದ್ದು, ಅದರ ಮೇಲೆ ಗಮನವಿಡಬೇಕಾದರೆ ರಾಜಕಾರಣಿಗಳಿಗೆ ಅದರಲ್ಲಿ ಮತಗಳಿಗೆ ಎಂಬುದನ್ನು ಮನದಟ್ಟು ಮಾಡಿಸಬೇಕಿದೆ ಎಂದು ಟೋನಿ ಬ್ಲೇರ್ ವ್ಯಂಗ್ಯವಾಡಿದ್ದಾರೆ.

Similar News