ವಿನೇಶ್ ಫೋಗಟ್ ಒಲಂಪಿಕ್ ಪದಕ ಗೆಲ್ಲಲು ವಿಫಲರಾದ ಬಳಿಕ ಚಿತ್ರಹಿಂಸೆ ನೀಡಲಾಗಿತ್ತು: ಆರೋಪ
ಹೊಸದಿಲ್ಲಿ: ಡಬ್ಲ್ಯುಎಫ್‌ಐ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪದ ಕುರಿತು ತನಿಖೆ ನಡೆಸಲು ತನಿಖಾ ಸಮಿತಿ ರಚನೆಗೆ ಒತ್ತಾಯಿಸಿ ಶುಕ್ರವಾರ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಒಎ)ಗೆ ಪ್ರತಿಭಟನಾ ನಿರತ ಕುಸ್ತಿಪಟುಗಳು ಕ್ರೀಡಾ ನಿರ್ವಾಹಕರ ವಿರುದ್ಧ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಐಒಎ ಅಧ್ಯಕ್ಷೆ ಪಿಟಿ ಉಷಾ ಅವರಿಗೆ ಬರೆದ ಪತ್ರದಲ್ಲಿ ಕುಸ್ತಿಪಟುಗಳು, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಬಗ್ಗೆ ತಮ್ಮ ಹಲವಾರು ಕಿರಿಯ ಸಹೋದ್ಯೋಗಿಗಳಿಂದ ಮಾಹಿತಿ ಪಡೆದಿದ್ದಾರೆ ಎಂದು ಹೇಳಿದ್ದಾರೆ. ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲಲು ವಿಫಲರಾಗಿದ್ದ ಸಂದರ್ಭದಲ್ಲಿ ವಿನೇಶ್ ಫೋಗಟ್ ಗೆ ವಿಪರೀತ ಚಿತ್ರಹಿಂಸೆ ನೀಡಲಾಗಿತ್ತು ಎಂಬ ವಿಚಾರವನ್ನೂ ಅಥ್ಲೀಟ್ ಗಳು ಬಹಿರಂಗಪಡಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತರಾದ ರವಿ ದಹಿಯಾ ಮತ್ತು ಬಜರಂಗ್ ಪುನಿಯಾ ಸೇರಿದಂತೆ ಐವರು ಕುಸ್ತಿಪಟುಗಳು ಪತ್ರಕ್ಕೆ ಸಹಿ ಹಾಕಿದ್ದಾರೆ. ರಿಯೊ ಗೇಮ್ಸ್ ಕಂಚಿನ ವಿಜೇತ ಸಾಕ್ಷಿ ಮಲಿಕ್ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಾದ ವಿನೇಶ್ ಫೋಗಟ್ ಮತ್ತು ದೀಪಕ್ ಪುನಿಯಾ ಸಹ ಸಹಿ ಹಾಕಿದ್ದಾರೆ.
WFI ಅನ್ನು ವಿಸರ್ಜಿಸಬೇಕು ಮತ್ತು ಅದರ ಅಧ್ಯಕ್ಷರನ್ನು ವಜಾಗೊಳಿಸಬೇಕು ಎಂದು ಕುಸ್ತಿಪಟುಗಳು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು. ರಾಷ್ಟ್ರೀಯ ಒಕ್ಕೂಟದ ವ್ಯವಹಾರಗಳನ್ನು ನಡೆಸಲು ಕುಸ್ತಿಪಟುಗಳೊಂದಿಗೆ ಸಮಾಲೋಚಿಸಿ ಹೊಸ ಸಮಿತಿಯನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದರು.