×
Ad

ಬಹಳಷ್ಟು ಸಂಶೋಧನೆ ನಂತರ ತಯಾರಿಸಲಾಗಿದೆ:ʼಮೋದಿʼ ಕುರಿತ ಸಾಕ್ಷ್ಯಚಿತ್ರಕ್ಕೆ ಬಿಬಿಸಿಯಿಂದ ಸ್ಪಷ್ಟನೆ

Update: 2023-01-20 15:55 IST

ಹೊಸದಿಲ್ಲಿ: ಗುಜರಾತ್‌ನಲ್ಲಿ 2002 ರಲ್ಲಿ ನಡೆದ ಗಲಭೆಗಳಲ್ಲಿ ಆಗಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ʼಪಾತ್ರʼ ದ ಕುರಿತು ತಾನು ಪ್ರಸಾರ ಮಾಡಿದ  ಸಾಕ್ಷ್ಯಚಿತ್ರವನ್ನು ʼಅತ್ಯುನ್ನತ ಸಂಪಾದಕೀಯ ಮಾನದಂಡಗಳ ಪ್ರಕಾರ ಬಹಳಷ್ಟು ಸಂಶೋಧನೆಯʼ ನಂತರ ತಯಾರಿಸಲಾಗಿತ್ತು ಎಂದು ಬಿಬಿಸಿ ಹೇಳಿದೆ.

ಈ ಸಾಕ್ಷ್ಯಚಿತ್ರದಲ್ಲಿ ಎತ್ತಲಾಗಿರುವ ವಿಚಾರಗಳ ಕುರಿತಂತೆ ಪ್ರತಿಕ್ರಿಯಿಸುವಂತೆ ಭಾರತ ಸರ್ಕಾರವನ್ನು ಬಿಬಿಸಿ ಕೋರಿತ್ತು ಆದರೆ ಸರ್ಕಾರ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಬಿಬಿಸಿ ಹೇಳಿದೆ.

"ಇಂಡಿಯಾ: ದಿ ಮೋದಿ ಕ್ವೆಶ್ಚನ್ ಎಂಬ ಎರಡು ಭಾಗಗಳ ಸಾಕ್ಷ್ಯಚಿತ್ರದ ಮೊದಲ ಭಾಗ ಜನವರಿ 17 ರಂದು ಪ್ರಸಾರಗೊಂಡಿತ್ತು. ಬ್ರಿಟಿಷ್‌ ಸರ್ಕಾರ ಈ ಗುಜರಾತ್‌ ಗಲಭೆಗಳ ಕುರಿತು  ತನಿಖೆ ನಡೆಸಲು ಕಳುಹಿಸಿದ ತಂಡವು ಆಗಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಮೋದಿ ಗಲಭೆಗಳಿಗೆ ಕಾರಣವಾದ "ನಿರ್ಭೀತಿಯ ವಾತಾವರಣಕ್ಕೆ ನೇರವಾಗಿ ಜವಾಬ್ದಾರರು," ಎಂದು ಕಂಡುಕೊಂಡಿದೆ ಎಂದು ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ.

ತನಿಖೆಗೆ ಆಗಮಿಸಿದ್ದ ತಂಡವು ಬ್ರಿಟಿಷ್‌ ಸರ್ಕಾರಕ್ಕೆ ಕಳುಹಿಸಿದ್ದ ವರದಿಯನ್ನು ಸಾಕ್ಷ್ಯಚಿತ್ರ ಉಲ್ಲೇಖಿಸಿತ್ತಲ್ಲದೆ ಈ ವರದಿ ಪ್ರಕಟಗೊಂಡಿಲ್ಲ ಎಂದು ಹೇಳಿದೆ. ಈ ಸಾಕ್ಷ್ಯಚಿತ್ರದ ಎರಡನೇ ಭಾಗ ಜನವರಿ 24 ರಂದು ಪ್ರಸಾರವಾಗಲಿದ್ದು ಅದರಲ್ಲಿ 2019 ರಲ್ಲಿ ಮರು ಆಯ್ಕೆಗೊಂಡ ನಂತರದ ಮೋದಿ ಸರ್ಕಾರದ ಟ್ರ್ಯಾಕ್‌ ರೆಕಾರ್ಡ್‌ ಮೇಲೆ ಬೆಳಕು ಚೆಲ್ಲಲಿದೆ.

"ಈ ಸಾಕ್ಷ್ಯಚಿತ್ರದಲ್ಲಿ ಬಿಜೆಪಿ ಸದಸ್ಯರ ಸಹಿತ ಹಲವರ ಅಭಿಪ್ರಾಯಗಳಿವೆ, ಭಾರತದ ಹಿಂದು ಬಹುಸಂಖ್ಯಾತರು ಹಾಗೂ ಮುಸ್ಲಿಂ ಅಲ್ಪಸಂಖ್ಯಾತರ ನಡುವಿನ ಉದ್ವಿಗ್ನತೆ ಹಾಗೂ ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ರಾಜಕಾರಣದ ಅವಲೋಕನ ಈ ಸಾಕ್ಷ್ಯಚಿತ್ರದಲ್ಲಿದೆ," ಎಂದು ಬಿಬಿಸಿ ಹೇಳಿಕೊಂಡಿದೆ.

ಈ ಸಾಕ್ಷ್ಯಚಿತ್ರ ಪ್ರಚಾರದ ಭಾಗವಾಗಿದೆ ಹಾಗೂ ತಿರಸ್ಕರಿಸಲ್ಪಟ್ಟ ಒಂದು ವಾದವನ್ನು ಮುಂದಿಡುವ ಉದ್ದೇಶ ಹೊಂದಿದೆ ಎಂದು ಹೇಳಿ ಗುರುವಾರ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟೀಕಿಸಿದ ನಂತರ ಬಿಬಿಸಿ ಯ ಸೃಷ್ಟೀಕರಣ ಬಂದಿದೆ.

Similar News