ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್ ಲಿ.ನಿಂದ 10 ಮೀನುಗಾರಿಕಾ ಬೋಟ್‌ಗಳ ನಿರ್ಮಾಣಕ್ಕೆ ಒಪ್ಪಂದ

Update: 2023-01-20 14:56 GMT

ಉಡುಪಿ: ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಅಧೀನ ಸಂಸ್ಥೆ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (ಯುಸಿಎಸ್ ಎಲ್) ವತಿಯಿಂದ 14 ಕೋಟಿ ರೂ. ಮೌಲ್ಯದ 10 ಆಳ ಸಮುದ್ರ ಮೀನುಗಾರಿಕಾ ಬೋಟ್ ನಿರ್ಮಾಣಕ್ಕೆ ಕೇರಳ ರಾಜ್ಯ ಮೀನುಗಾರಿಕಾ ಇಲಾಖೆ ಹಾಗೂ ಕೇರಳದ ಐದು ಸ್ಥಳೀಯ ಮೀನುಗಾರಿಕಾ ಸ್ವಸಹಾಯ ಸಂಘಗಳ ನಡುವೆ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. 

ಕೇರಳ ರಾಜ್ಯ ಸರಕಾರದ ಮೀನುಗಾರಿಕಾ ಇಲಾಖಾ ನಿರ್ದೇಶಕ ಡಾ. ಅದೀಲಾ ಅಬ್ದುಲ್ಲಾ, ಯುಸಿಎಸ್‌ಎಲ್‌ನ ಸಿಇಒ ಹರಿಕುಮಾರ್ ಎ.ಎ. ಹಾಗೂ ಹಾಗೂ ವಿವಿಧ ಸ್ವಸಹಾಯ ಗುಂಪುಗಳಿಗೆ ಸೇರಿದ ಐವರು ಮೀನುಗಾರರು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಗುರುವಾರ ಒಪ್ಪಂದಕ್ಕೆ ಸಹಿ ಹಾಕಿದರು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ(ಪಿಎಂಎಂಎಸ್‌ವೈ) ಯೋಜನೆ ಮಾರ್ಗಸೂಚಿಗಳಿಗನುಗುಣವಾಗಿ ಆಳ ಸಮುದ್ರ ಮೀನುಗಾರಿಕೆ ಗಾಗಿಯೇ ಈ ವಿಶೇಷ ಬೋಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯಾಧುನಿಕ ನೇವಿಗೇಶನ್ ಮತ್ತು ಸಂಪರ್ಕ ಸಂವಹನದ ಆಧುನಿಕ ವ್ಯವಸ್ಥೆಯ ಜಿಪಿಎಸ್, ಅಟೋಮೇಟಿಕ್ ಐಡೆಂಟಿಫಿಕೇಶನ್ ಸಿಸ್ಟಮ್, ಫಿಶ್ ಫೈಂಡರ್, ಮ್ಯಾಗ್ನೆಟಿಕ್ ಕಂಪಾಸ್ ವ್ಯವಸ್ಥೆಯನ್ನು ಈ ಮೀನುಗಾರಿಕಾ ಬೋಟ್‌ಗಳಿಗೆ ಅಳವಡಿಸಲಾಗುತ್ತದೆ.

ಪ್ರತಿಯೊಂದು 22.7ಮೀ. ಉದ್ದ ಹಾಗೂ 6.4ಮೀ. ಅಗಲವುಳ್ಳ 12 ಜನರ ಸಾಮರ್ಥ್ಯದ ಈ ಹಡಗುಗಳು ಗರಿಷ್ಠ ಎಂಟು ನಾಟ್ಸ್ ವೇಗದಲ್ಲಿ ಚಲಿಸಬಲ್ಲದು. 

ಮೀನುಗಾರಿಕೆಗಾಗಿ ಈ ಬೋಟ್‌ಗಳಲ್ಲಿ ಲಾಂಗ್ ಲೈನರ್ ವಿಂಚ್, ಗಿಲ್ ನೆಟ್ ಹೌಲರ್‌ಗಳಿದ್ದು, ಉತ್ಪಾದಕತೆ ಹೆಚ್ಚಳ, ಸುರಕ್ಷತೆ ಮತ್ತು ಮೀನುಗಾರ ಸಮುದಾಯದ ಬದುಕಿನ ಉನ್ನತಿಗೆ ಪೂರಕವಾಗಿರಲಿವೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

Similar News