ಮಲ್ಪೆ: ರಜತ ಉಡುಪಿ - ಬೀಚ್ ಉತ್ಸವಕ್ಕೆ ಚಾಲನೆ

Update: 2023-01-20 15:54 GMT

ಉಡುಪಿ: ಜಿಲ್ಲೆಯಲ್ಲಿ 25 ವರ್ಷಗಳ ಹಿಂದಿನಿಂದ  ಇಂದಿನವರೆಗೆ ಆದ ಅಭಿವೃದ್ಧಿ ಹಾಗೂ ಮುಂದಿನ ಅಭಿವೃದ್ದಿ ಬಗ್ಗೆ ದೂರದೃಷ್ಟಿ ಕಾರ್ಯಕ್ರಮದ ಜೊತೆ ಮುಂದಿನ ಪೀಳಿಗೆಗೆ  ಇನ್ನೂ ಹೆಚ್ಚಿನ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ಆಶ್ರಯ ದಲ್ಲಿ ಮಲ್ಪೆ ಬೀಚ್ ನಲ್ಲಿ ಹಮ್ಮಿಕೊಳ್ಳಲಾದ ಮೂರು ದಿನಗಳ ರಜತ ಉಡುಪಿ - ಬೀಚ್ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲೆಯ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ದಿಗೊಳ್ಳಬೇಕಾಗಿದೆ. ಪ್ರವಾಸಿಗರು, ಸಾಮಾನ್ಯ ನಾಗರಿಕರು ತಮ್ಮ ಸಮಸ್ಯೆಗಳ ಬಗ್ಗೆ ಹಾಗೂ ಜಿಲ್ಲೆಯಲ್ಲಿ ಆಗಬೇಕಾದ ಅಭಿವೃದ್ಧಿ ಕುರಿತು ಪತ್ರ ಮೂಲಕ  ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಅಧ್ಯಕ್ಷತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಉಪಾಧ್ಯಕ್ಷೆ ಲಕ್ಣ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ಜಿಪಂ ಸಿಇಒ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ವೀಣಾ, ತರಬೇತಿನಿರತ ಐಎಎಸ್ ಅಧಿಕಾರಿ ಯತೀಶ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಸ್ವಾಗತಿಸಿದರು. ಉಡುಪಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

ಇದೇ ಸಂದರ್ಭದಲ್ಲಿ ಒಮಾನ್ ನ ನುರಿತ ತರಬೇತುದಾರರನ್ನು‌ ಒಳಗೊಂಡ ಹೊಸ ಫ್ಲೈ ಬೋಡ್೯ ವಾಟರ್ ಸ್ಪೋರ್ಟ್ಸ್ ಗೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ರಾಜೇಶ್ ಕೃಷ್ಣನ್ ಹಾಗೂ ಚಂದನ್ ಶೆಟ್ಟಿ ಅವರಿಂದ ಸಂಗೀತ ರಸಮಂಜರಿ ನಡೆಯಿತು. 

ಉತ್ಸವದ ಪ್ರಯುಕ್ತ ಬೀಚ್ ನಲ್ಲಿ ಮೀನು ಸಹಿತ ಕರಾವಳಿಯ ವಿವಿಧ ಖಾದ್ಯಗಳ ಆಹಾರ ಮೇಳ, ಎಸ್ ಕೆಪಿಎ ಉಡುಪಿ ವಲಯದ ವತಿಯಿಂದ ಛಾಯಾಚಿತ್ರ ಪ್ರದರ್ಶನ, ರಮೇಶ್ ರಾವ್ ನೇತೃತ್ವದಲ್ಲಿ 15 ಕಲಾವಿದರಿಂದ ಚಿತ್ರಕಲಾ ಶಿಬಿರ ಗಮನ ಸೆಳೆಯಿತು. ಅಲ್ಲದೆ ಸುಡುಮದ್ದು ಪ್ರದರ್ಶನ,  ಸಮುದ್ರ ಮಧ್ಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಬೋಟ್ ಗಳು ಆಕರ್ಷಣೀಯವಾಗಿದ್ದವು.

Similar News