×
Ad

ಪ್ರಚಾರದ ಹಿತಾಸಕ್ತಿ: ಬಿಹಾರ ಜಾತಿ ಸಮೀಕ್ಷೆ ವಿರೋಧಿ ಅರ್ಜಿಗಳಿಗೆ ಸುಪ್ರೀಂ ಕೋರ್ಟ್ ಆಕ್ಷೇಪ

Update: 2023-01-20 21:31 IST

ಹೊಸದಿಲ್ಲಿ, ಜ. 20: ಬಿಹಾರದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್(Supreme Court) ಶುಕ್ರವಾರ ನಿರಾಕರಿಸಿದೆ. ಈ ಅರ್ಜಿಗಳನ್ನು ‘‘ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಶನ್’’ (ಪ್ರಚಾರದ ಹಿತಾಸಕ್ತಿ ಹೊಂದಿರುವ ಅರ್ಜಿ) ಎಂಬುದಾಗಿ ಬಣ್ಣಿಸಿರುವ ನ್ಯಾಯಾಲಯವು, ಈ ವಿಷಯದಲ್ಲಿ ಅರ್ಜಿದಾರರು ಪಾಟ್ನಾ ಹೈಕೋರ್ಟ್ ಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದೆ.

ಜಾತಿ ಆಧಾರಿತ ಸಮೀಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಮೂರು ಅರ್ಜಿಗಳು ದಾಖಲಾಗಿವೆ. ಏಕ್ ಸೋಚ್ ಏಕ್ ಪ್ರಯಾಸ್ ಎಂಬ ಒಂದು ಸಂಘಟನೆ, ಹಿಂದೂ ಸೇನಾ ಎಂಬ ಬಲಪಂಥೀಯ ಸಂಘಟನೆ ಮತ್ತು ಅಖಿಲೇಶ್ ಕುಮಾರ್ ಎಂಬ ಬಿಹಾರ ನಿವಾಸಿ ಅರ್ಜಿಗಳನ್ನು ಸಲ್ಲಿಸಿದವರು.

‘‘ಇದೊಂದು ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಶನ್. ಇಂಥಿಂಥ ಜಾತಿಗೆ ಎಷ್ಟು ಮೀಸಲಾತಿ ಕೊಡಬೇಕು ಎಂಬ ಬಗ್ಗೆ ನಾವು ನಿರ್ದೇಶನಗಳನ್ನು ಕೊಡಲು ಹೇಗೆ ಸಾಧ್ಯ? ಇಲ್ಲ, ಇಂಥ ನಿರ್ದೇಶನಗಳನ್ನು ಕೊಡಲು ನಮಗೆ ಸಾಧ್ಯವಿಲ್ಲ ಹಾಗೂ ಇಂಥ ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ’’ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ(B.R Gavai) ಮತ್ತು ವಿಕ್ರಮ್ ನಾಥ್(Vikram Nath) ಅವರನ್ನೊಳಗೊಂಡ ನ್ಯಾಯಪೀಠವೊಂದು ಅರ್ಜಿದಾರರ ವಕೀಲರಿಗೆ ಹೇಳಿತು.

ಈ ವಿಷಯದ ಬಗ್ಗೆ ಪಾಟ್ನಾ ಹೈಕೋರ್ಟ್ ಈಗಾಗಲೇ ವಿಚಾರಣೆ ನಡೆಸಿದೆ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ. ರಾಜ್ಯವು ಜಾತಿ-ಆಧಾರಿತ ಜನಗಣತಿ ಮಾಡುತ್ತಿದೆ ಎಂಬ ಅರ್ಜಿದಾರರ ವಾದವನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಅದು ಜಾತಿ ಆಧಾರಿತ ‘ಸಮೀಕ್ಷೆ’ಯಾಗಿದೆ ಎಂಬುದಾಗಿ ಅದಕ್ಕೆ ಸಂಬಂಧಿತ ಅಧಿಕೃತ ಅಧಿಸೂಚನೆ ಹೇಳುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಜಾತಿ ಜನಗಣತಿಯನ್ನು ನಡೆಸುವ ಮೂಲಕ ಬಿಹಾರ ಸರಕಾರವು ‘‘ಭಾರತದ ಸಮಗ್ರತೆ ಮತ್ತು ಏಕತೆಯನ್ನು’’ ಒಡೆಯಲು ಬಯಸಿದೆ ಎಂಬುದಾಗಿ ಹಿಂದೂ ಸೇನಾ ತನ್ನ ಅರ್ಜಿಯಲ್ಲಿ ಆರೋಪಿಸಿದೆ. ಬಿಹಾರದಲ್ಲಿ ಜಾತಿ ಸಮೀಕ್ಷೆಯು ಜನವರಿ 8ರಂದು ಆರಂಭಗೊಂಡಿದೆ.

Similar News