ರ‍್ಯಾಗಿಂಗ್ ನಿಂದಾಗಿ ಐಐಟಿ ಖರಗಪುರ ಆವರಣದಲ್ಲಿ ವಿದ್ಯಾರ್ಥಿಯ ಸಾವು: ನಿರ್ದೇಶಕರಿಗೆ ಹೈಕೋರ್ಟ್ ತರಾಟೆ
ಕೋಲ್ಕತ, ಜ. 20: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಖರಗಪುರದ ಆವರಣದಲ್ಲಿ ಸಂಭವಿಸಿದ ವಿದ್ಯಾರ್ಥಿಯೋರ್ವನ ಸಾವಿಗೆ ಸಂಬಂಧಿಸಿ ಕಲ್ಕತ್ತಾ ಹೈಕೋರ್ಟ್(Calcutta High Court) ಶುಕ್ರವಾರ ಕಾಲೇಜಿನ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ. ಅಗಾಧ ಪ್ರತಿಭೆಯುಳ್ಳ ವಿದ್ಯಾರ್ಥಿಗಳು ವಿಭಿನ್ನ ಸಾಮಾಜಿಕ ಅಥವಾ ಆರ್ಥಿಕ ಹಿನ್ನೆಲೆಗಳಿಂದ ಕಾಲೇಜಿಗೆ ಬರುತ್ತಾರೆ ಹಾಗೂ ಇತರ ಹಿನ್ನೆಲೆಗಳಿಂದ ಬರುವ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಬೆರೆಯಲು ಅವರಿಗೆ ಸಾಧ್ಯವಾಗಲಿಕ್ಕಿಲ್ಲ ಎನ್ನುವುದನ್ನು ನಿರ್ದೇಶಕರು ತಿಳಿದುಕೊಳ್ಳಬೇಕಾಗಿತ್ತು ಎಂದು ಹೈಕೋರ್ಟ್ ಹೇಳಿದೆ.
ರ‍್ಯಾಗಿಂಗ್ ಸಂಬಂಧಿಸಿದ ದೂರೊಂದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದಕ್ಕಾಗಿ ಹೈಕೋರ್ಟ್ ಕಳೆದ ವರ್ಷದ ಡಿಸೆಂಬರ್ 1ರಂದು ನಿರ್ದೇಶಕರಿಗೆ ಛೀಮಾರಿಯನ್ನೂ ಹಾಕಿತ್ತು. ಆ ದೂರಿನ ಬಳಿಕ ವಿದ್ಯಾರ್ಥಿಯ ಸಾವು ಸಂಭವಿಸಿತ್ತು.
‘‘ಈ ವಿಷಯವನ್ನು ಲಘುವಾಗಿ ಪರಿಗಣಿಸುವುದನ್ನು ನಾವು ಸಹಿಸುವುದಿಲ್ಲ. ಇದು ಈ ನ್ಯಾಯಾಲಯದ ವಿನೀತ ಮನವಿ. ದಯವಿಟ್ಟು ಯಾರದೇ ಪಕ್ಷ ವಹಿಸಲು ಹೋಗಬೇಡಿ’’ ಎಂದು ನ್ಯಾಯಾಲಯವು ಶುಕ್ರವಾರ ಪೊಲೀಸರಿಗೆ ಸೂಚಿಸಿತು.
ಅಸ್ಸಾಮ್ ನ ತೀನ್ಸುಕಿಯ ನಿವಾಸಿಯಾಗಿರುವ 23 ವರ್ಷದ ವಿದ್ಯಾರ್ಥಿ ಫೈಝಾನ್ ಅಹ್ಮದ್(Faizan Ahmad) ಕಳೆದ ವರ್ಷದ ಫೆಬ್ರವರಿಯಲ್ಲಿ ಕಾಲೇಜಿನ ಆಡಳಿತಕ್ಕೆ ರ‍್ಯಾಗಿಂಗ್ ಸಂಬಂಧಿ ದೂರು ಸಲ್ಲಿಸಿದ್ದರು. ಅದಾದ ತಿಂಗಳುಗಳ ಬಳಿಕ, ಅಂದರೆ ಅಕ್ಟೋಬರ್ 14ರಂದು ಅವರ ಕೊಳೆತ ಶವವು ಕಾಲೇಜಿನ ಹಾಸ್ಟೆಲೊಂದರಲ್ಲಿ ಪತ್ತೆಯಾಗಿತ್ತು.
ರ‍್ಯಾಗಿಂಗ್ ಸಂಬಂಧಿಸಿದ ಕಾಲೇಜಿನ ಮಾರ್ಗದರ್ಶಿ ಸೂತ್ರಗಳು ರ‍್ಯಾಗಿಂಗ್ ಕುರಿತ ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿದೆಯೇ ಎನ್ನುವುದನ್ನು ಪರಿಶೀಲಿಸುವುದಕ್ಕಾಗಿ ಉನ್ನತಾಧಿಕಾರದ ಸಮಿತಿಯೊಂದನ್ನು ರಚಿಸಬೇಕು ಎಂದು ಹೈಕೋರ್ಟ್ ಹೇಳಿದೆ.
‘‘ಗವರ್ನರ್ಗಳ ಮಂಡಳಿಯ ಸಭೆಯೊಂದು ಫೆಬ್ರವರಿ 10ರಂದು ನಡೆಯಲಿದೆ ಎಂಬುದಾಗಿ ತಿಳಿಸಲಾಗಿದೆ. ಈ ಘಟನೆಯ ಬಗ್ಗೆ ಮಾತ್ರವಲ್ಲ, ಇಂಥ ಘಟನೆಗಳು ಭವಿಷ್ಯದಲ್ಲಿ ನಡೆಯುವುದನ್ನು ತಡೆಯುವುದಕ್ಕಾಗಿಯೂ ಐಐಟಿ ಖರಗಪುರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಎಂಬುದಾಗಿ ನಾವು ನಿರೀಕ್ಷಿಸುತ್ತೇವೆ’’ ಎಂದು ನ್ಯಾಯಾಲಯ ಹೇಳಿತು. ಪ್ರಕರಣದ ಮುಂದಿನ ವಿಚಾರಣೆಯು ಫೆಬ್ರವರಿ 13ರಂದು ನಡೆಯಲಿದೆ.
ನಿರ್ದೇಶಕರು ಸ್ವತಃ ಹಾಜರಾಗಲು ಆದೇಶ ನೀಡಿದ್ದ ನ್ಯಾಯಾಲಯ
ಮೂರನೇ ವರ್ಷದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಫೈಝಾನ್ ಅಹ್ಮದ್ ರ ಹೆತ್ತವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು, ಶುಕ್ರವಾರದ ವಿಚಾರಣೆಗೆ ಸ್ವತಃ ಹಾಜರಾಗುವಂತೆ ಐಐಟಿ(IIT ) ನಿರ್ದೇಕರಿಗೆ ಆದೇಶ ನೀಡಿತ್ತು.
ಐಐಟಿ ಆವರಣದಲ್ಲಿ ನಡೆದ ನಮ್ಮ ಮಗನ ಸಾವು ‘ಸ್ಪಷ್ಟ ಕೊಲೆ ಪ್ರಕರಣ’ವಾಗಿದೆ ಎಂದು ತಮ್ಮ ದೂರಿನಲ್ಲಿ ಹೆತ್ತವರು ಆರೋಪಿಸಿದ್ದಾರೆ. ರ‍್ಯಾಗಿಂಗ್ ಬಗ್ಗೆ ಕಾಲೇಜಿನ ಅಧಿಕಾರಿಗಳಿಗೆ ದೂರು ನೀಡಿದ ಬಳಿಕವೂ ತಮ್ಮ ಮಗನ ಮೇಲೆ ರ್ಯಾಗಿಂಗ್ ಮುಂದುವರಿಸಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
‘ನಿರ್ಲಕ್ಷದ ವರದಿ’ ಸಲ್ಲಿಸಿದ್ದ ನಿರ್ದೇಶಕರು
ವಿದ್ಯಾರ್ಥಿಯ ರ‍್ಯಾಗಿಂಗ್ ದೂರಿನ ಬಗ್ಗೆ ತೆಗೆದುಕೊಂಡ ಕ್ರಮಗಳಿಗೆ ಸಂಬಂಧಿಸಿ ಐಐಟಿ ನಿರ್ದೇಶಕರು ಈ ಹಿಂದೆ ‘ಕಾಟಾಚಾರದ ವರದಿ’ಯೊಂದನ್ನು ಸಲ್ಲಿಸಿದ್ದರು. ಆ ಅಸ್ಪಷ್ಟ ವರದಿಗಾಗಿ ನ್ಯಾಯಾಲಯವು ಕಾಲೇಜು ಆಡಳಿತವನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ವರದಿಯಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ ಶುಕ್ರವಾರ ಕಾಲೇಜು ವಿಸ್ತೃತ ವರದಿಯೊಂದನ್ನು ಸಲ್ಲಿಸಿದೆ.
ನಿರ್ದೇಶಕರ ಆರಂಭಿಕ ವರದಿಯು, ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನದಂತೆ ಕಂಡುಬರುತ್ತದೆ ಹಾಗೂ ಅದು ‘‘ಸಂಪೂರ್ಣವಾಗಿ ದಾರಿತಪ್ಪಿಸುವ ವರದಿ’’ಯಾಗಿದೆ ಎಂದು ನ್ಯಾಯಾಲಯ ಹೇಳಿತ್ತು.