ಉಡುಪಿ: ಜ.22ರಂದು ಜಯಕರ ಶೆಟ್ಟಿ ಇಂದ್ರಾಳಿ ಅಭಿನಂದನಾ ಕಾರ್ಯಕ್ರಮ

Update: 2023-01-20 16:20 GMT

ಉಡುಪಿ: ನಾಲ್ಕು ದಶಕಗಳಿಗೂ ಅಧಿಕ ಸಮಯದಿಂದ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಪ್ರಸಕ್ತ ವರ್ಷದಲ್ಲಿ ಸಹಕಾರ ಕ್ಷೇತ್ರದ ಮಹೋನ್ನತ ಗೌರವವಾದ ‘ಸಹಕಾರ ರತ್ನ’ ಪ್ರಶಸ್ತಿ ಪಡೆದ ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಅಭಿನಂದಿಸುವ ಕಾರ್ಯಕ್ರಮವೊಂದು ಇದೇ  ಜ.22ರ ರವಿವಾರ ಬೆಳಗ್ಗೆ ಉಡುಪಿಯಲ್ಲಿ ನಡೆಯಲಿದೆ ಎಂದು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂಜೀವ ಕಾಂಚನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಕರ ಶೆಟ್ಟಿ ಇಂದ್ರಾಳಿ ಅವರ ಅಭಿನಂದನಾ ಸಮಾರಂಭ ಹಾಗೂ ಸೇವಾ ಚಿಂತನಾ ಕಾರ್ಯಕ್ರಮ ಜ.22ರಂದು ಬೆಳಗ್ಗೆ 9:00ರಿಂದ ಉಡುಪಿಯ ಮಿಷನ್ ಕಂಪೌಂಡಿನಲ್ಲಿರುವ ಬಾಸೆಲ್ ಮಿಷನರೀಸ್ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದವರು ಹೇಳಿದರು.

ಜಯಕರ ಶೆಟ್ಟಿ ಇಂದ್ರಾಳಿ ಅವರು ಶತಮಾನೋತ್ಸವನ್ನು ಯಶಸ್ವಿಯಾಗಿ ಪೂರೈಸಿರುವ ಉಡುಪಿಯ ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಕಳೆದ 42 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದು, ಇದನ್ನು ಅದನ್ನು ಜಿಲ್ಲೆಯ ಯಶಸ್ವಿ ಸಹಕಾರಿ ಸಂಸ್ಥೆಯಾಗಿ ಜನಮನದಲ್ಲಿ ಪ್ರತಿಷ್ಠಾಪಿಸಿದ್ದಾರೆ ಎಂದರು.

1918ರಲ್ಲಿ ಸ್ಥಾಪನೆಗೊಂಡ ಈ ಸೊಸೈಟಿ, 1978ರಿಂದ 1981ರವರೆಗೆ ವ್ಯವಹಾರ ಸ್ಥಗಿತಗೊಂಡು ಮುಚ್ಚುವ ಸ್ಥಿತಿಯಲ್ಲಿದ್ದು, ಸರಕಾರದ ಆಡಳಿತಾಧಿಕಾರಿಗಳ ಕಾಲದಿಂದ ವಿವಿಧ ಹುದ್ದೆಗಳ ಮೂಲಕ ಅದಕ್ಕೊಂದು ಹೊಸ ಆಯಾಮ ದೊರಕಿಸಿಕೊಟ್ಟು ಅದೊಂದು ಬೃಹತ್ ಸಂಸ್ಥೆಯಾಗಿ ಬೆಳೆಯಲು ಕಾರಣೀಭೂತರಾದರು ಎಂದು ಸಂಜೀವ ಕಾಂಚನ್ ವಿವರಿಸಿದರು.

ಶಿವಳ್ಳಿ ಗ್ರಾಮದ ಇಂದ್ರಾಳಿಯ ಪ್ರತಿಷ್ಠಿತ ಕೃಷಿಕ ಬಂಟ ಮನೆತನದಲ್ಲಿ ಜನಿಸಿದ ಜಯಕರ ಶೆಟ್ಟಿ ಇಂದ್ರಾಳಿ ಅವರು ಸಹಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತರಾಗದೇ, ಜಿಲ್ಲೆಯ ಶೈಕ್ಷಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದಾರೆ. ಸದ್ಯ ಅವರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತಿದ್ದಾರೆ.

ಜ.22ರ ಕಾರ್ಯಕ್ರಮದಲ್ಲಿ ಜಯಕರ ಶೆಟ್ಟಿ ಅವರ ಅಭಿನಂದನಾ ಗ್ರಂಥ ‘ಜಯಪಥ’ವೂ ಬಿಡುಗಡೆಗೊಳ್ಳಲಿದೆ. ಅಲ್ಲದೇ ಈ ವರ್ಷದ ಸಹಕಾರ ರತ್ನ ಪ್ರಶಸ್ತಿ ಪಡೆದಿರುವುದಕ್ಕಾಗಿ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಷನ್‌ನ ಅಧ್ಯಕ್ಷ ಯಶಪಾಲ್ ಸುವರ್ಣರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.

ದ.ಕ.ಜಿಲ್ಲಾ ಕೇಂದ್ರ ಸಹಾಕರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸುವರು. ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಮೂಡಬಿದರೆಯ ಡಾ. ಮೋಹನ್ ಆಳ್ವ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್,  ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ಯರಾಜ್ ಹಾಗೂ ಇತರರು ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಉಪಾಧ್ಯಕ್ಷ ಎಲ್.ಉಮಾನಾಥ್, ಅಭಿನಂದನಾ ಸಮಿತಿಯ ಸಂಚಾಲಕ ಪುರುಷೋತ್ತಮ ಶೆಟ್ಟಿ ಪ್ರಭಾರ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ.ಶೇರಿಗಾರ್ ಹಾಗೂ ಪ್ರವೀಣ್‌ಕುಮಾರ್ ಉಪಸ್ಥಿತ ರಿದ್ದರು.

Similar News