ವಿಚಾರಣೆಗೆ ಹಾಜರಾಗದ ಮಹಾರಾಷ್ಟ್ರ ಸ್ಪೀಕರ್, ಸಚಿವರ ವಿರುದ್ಧ ಕೋರ್ಟ್ ವಾರಂಟ್
ಮುಂಬೈ,ಜ.20: ಪ್ರಕರಣವೊಂದರ ವಿಚಾರಣೆಗೆ ಹಾಜರಾಗದ್ದಕ್ಕಾಗಿ ಮುಂಬೈನ ವಿಶೇಷ ನ್ಯಾಯಾಲಯವು ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narwekar) ಮತ್ತು ಸಂಪುಟ ಸಚಿವ ಮಂಗಲ್ ಪ್ರಭಾತ ಲೋಧಾ(Mangal Prabhat Lodha) ಅವರಿಗೆ ಜಾಮೀನು ನೀಡಬಹುದಾದ ವಾರಂಟ್ ಗಳನ್ನು ಹೊರಡಿಸಿದೆ.
ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಕೆಲವು ಜನರು ಬೃಹನ್ಮುಂಬೈ ಇಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್ಪೋರ್ಟ್ ಅಂಡರ್ಟೇಕಿಂಗ್ (ಬೆಸ್ಟ್)ನ ಮಹಾ ಪ್ರಬಂಧಕರ ಕಚೇರಿಗೆ ನುಗ್ಗಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಆರೋಪಗಳನ್ನು ರೂಪಿಸಲು ನ್ಯಾಯಾಲಯಕ್ಕೆ ಸಾಧ್ಯವಾಗದ ಬಳಿಕ ಈ ಬೆಳವಣಿಗೆ ನಡೆದಿದೆ.
ಪ್ರಕರಣದಲ್ಲಿ ಹೆಸರಿಸಲಾಗಿರುವ ಎಲ್ಲ ಜನರು ನ್ಯಾಯಾಲಯದಲ್ಲಿ ಹಾಜರಿರಲಿಲ್ಲ,ಹೀಗಾಗಿ ಆರೋಪಿಗಳು ಬಿಜೆಪಿ ಶಾಸಕರೇ ಅಥವಾ ಕಾರ್ಪೊರೇಟರ್ಗಳೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯಕ್ಕೆ ಸಾಧ್ಯವಾಗಿರಲಿಲ್ಲ.
ಶುಕ್ರವಾರ ವಿಚಾರಣೆ ಸಂದರ್ಭದಲ್ಲಿ ನಾರ್ವೇಕರ್ ಪರ ವಕೀಲರು,ತನ್ನ ಕಕ್ಷಿದಾರರು ವಿಧಾನಸಭೆಯಲ್ಲಿ ವ್ಯಸ್ತರಾಗಿದ್ದಾರೆ. ಅವರ ಹಾಜರಾತಿಯನ್ನು ನ್ಯಾಯಾಲಯವು 15 ನಿಮಿಷಗಳ ಕಾಲ ವಿಳಂಬಿಸಬಹುದು ಎಂದು ಹೇಳಿದಾಗ,ಕೆರಳಿದ ನ್ಯಾ.ರೋಕ್ಡೆಯವರು,‘ನಾನೇನು ಮಾಡಬೇಕು ಎನ್ನುವುದನ್ನು ನೀವು ಹೇಳುತ್ತೀರಾ? ಹಾಗಿದ್ದರೆ ಅವರನ್ನು ಕರೆಸಿ ಮತ್ತು ನಾನು ವಾರಂಟ್ ರದ್ದುಗೊಳಿಸುತ್ತೇನೆ. ನನಗೆ ಪರ್ಯಾಯವನ್ನು ನೀವು ಸೂಚಿಸುತ್ತಿದ್ದೀರಿ,ನಾನು ಸಾಕಷ್ಟು ಅವಕಾಶಗಳನ್ನು ನೀಡಿದ್ದೇನೆ ’ ಎಂದು ಕಿಡಿಕಾರಿದರು.
ನಾರ್ವೇಕರ್,ಲೋಧಾ ಮತ್ತು ಇತರ ಕೆಲವರು ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ ಎಂದು ವಕೀಲರೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.