ಮುಸ್ಲಿಮರಲ್ಲಿರುವ ನಿಖಾ ಹಲಾಲ, ಬಹುಪತ್ನಿತ್ವ ಕುರಿತ ವಿಚಾರಣೆಗೆ ಪಂಚ ನ್ಯಾಯಾಧೀಶರ ಪೀಠ ರಚನೆ
ಹೊಸದಿಲ್ಲಿ,ಜ.20: ಮುಸ್ಲಿಮರಲ್ಲಿ ಬಹುಪತ್ನಿತ್ವ ಮತ್ತು ನಿಖಾ ಹಲಾಲ(Nikha halal) ಪದ್ಧತಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಗಾಗಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವನ್ನು ರಚಿಸುವುದಾಗಿ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಪ್ರಕಟಿಸಿದೆ.
ಹಿಂದಿನ ಸಂವಿಧಾನ ಪೀಠದ ಇಬ್ಬರು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ(Indira Banerjee) ಮತ್ತು ಹೇಮಂತ ಗುಪ್ತಾ(Hemant Gupta) ಅವರು ಈಗ ನಿವೃತ್ತರಾಗಿರುವುದರಿಂದ ಐವರು ನ್ಯಾಯಾಧೀಶರ ಹೊಸ ಪೀಠವನ್ನು ರಚಿಸುವ ಅಗತ್ಯವಿದೆ ಎಂಬ ಅರ್ಜಿದಾರರಲ್ಲೋರ್ವರಾದ ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ(Ashwini Upadhyay) ಅವರ ನಿವೇದನೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್(D.Y. Chandrachud) ನೇತೃತ್ವದ ಪೀಠವು ಪರಿಗಣಿಸಿತು.
‘ಐವರು ನ್ಯಾಯಾಧೀಶರ ಪೀಠದ ಮುಂದೆ ಅತ್ಯಂತ ಮಹತ್ವದ ವಿಷಯಗಳು ಬಾಕಿಯಿವೆ. ನಾವು ಪೀಠವೊಂದನ್ನು ರಚಿಸುತ್ತೇವೆ ಮತ್ತು ಇದನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ ’ಎಂದು ಮು.ನ್ಯಾ.ಚಂದ್ರಚೂಡ್ ತಿಳಿಸಿದರು.