"ನಿಮಗಿಲ್ಲಿ ಚಿತ್ರ ಮಾಡುವ ಬಯಕೆ ಇದ್ದರೆ ನನ್ನೊಂದಿಗೆ ಮಾತುಕತೆ ನಡೆಸಿ"

ರಾಜಮೌಳಿಗೆ ಸೂಚಿಸಿದ ಖ್ಯಾತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರಾನ್

Update: 2023-01-21 09:03 GMT

ಹೊಸದಿಲ್ಲಿ: ಹಾಲಿವುಡ್ ದಂತಕತೆ ಜೇಮ್ಸ್ ಕ್ಯಾಮರಾನ್(James Cameron), "ನಿಮಗಿಲ್ಲಿ ಚಿತ್ರ ಮಾಡುವ ಬಯಕೆ ಇದ್ದರೆ ನನ್ನೊಂದಿಗೆ ಮಾತುಕತೆ ನಡೆಸಿ" ಎಂದು ಖ್ಯಾತ ಟಾಲಿವುಡ್ ನಿರ್ದೇಶಕ ಎಸ್.ಎಸ್. ರಾಜಮೌಳಿಗೆ (SS Rajamouli) ಸೂಚಿಸಿದ್ದು, ಈ ಸಂಭಾಷಣೆಯ ವಿಡಿಯೊವನ್ನು ಖುದ್ದು ರಾಜಮೌಳಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ, "ನಾನು ನಿಮ್ಮ ಚಿತ್ರಗಳನ್ನು ನೋಡಿದ್ದೇನೆ.. ಅವು ದೊಡ್ಡ ಪ್ರೇರಣೆಗಳು. ಟರ್ಮಿನೇಟರ್, ಅವತಾರ್, ಟೈಟಾನಿಕ್‌ನಿಂದ ಹಿಡಿದು ಎಲ್ಲ ಚಿತ್ರಗಳೂ. ನಿಮ್ಮ ಕೆಲಸವನ್ನು ಇಷ್ಟಪಟ್ಟಿದ್ದೇನೆ" ಎಂದು ಜೇಮ್ಸ್ ಕ್ಯಾಮರಾನ್‌ ಮಾತಿಗೆ ಪ್ರತಿಯಾಗಿ ಎಸ್.ಎಸ್. ರಾಜಮೌಳಿ ತಿಳಿಸಿರುವುದು ದಾಖಲಾಗಿದೆ ಎಂದು ndtv.com ವರದಿ ಮಾಡಿದೆ.

ಅದಕ್ಕೆ ಧನ್ಯವಾದ ಸೂಚಿಸಿರುವ ಹಾಲಿವುಡ್‌ನ ಹಿರಿಯ ನಿರ್ದೇಶಕ ಜೇಮ್ಸ್ ಕ್ಯಾಮರಾನ್, "ಧನ್ಯವಾದ. ನಿಮ್ಮ ಮಾತು ಸರಿಯಿದೆ. ನಾನೀಗ ನಿಮ್ಮ ಪಾತ್ರಗಳನ್ನು ವೀಕ್ಷಿಸುತ್ತಿದ್ದು, ಅವುಗಳನ್ನು ನೋಡಿ ಸಂಭ್ರಮದ ಅನುಭವವಾಗುತ್ತಿದೆ" ಎಂದು ರಾಜಮೌಳಿಯನ್ನು ಪ್ರಶಂಸಿದ್ದಾರೆ.

RRR ಸಿನಿಮಾದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಜೇಮ್ಸ್ ಕ್ಯಾಮರಾನ್, "ರಂಗಸಜ್ಜಿಕೆಗಳು.. ನಿಮ್ಮ ಬೆಂಕಿ, ನೀರಿನ ಕತೆ. ಒಂದರ ನಂತರ ಒಂದರಂತೆ ಬಯಲಾಗುವ ಸನ್ನಿವೇಶಗಳು. ನಂತರ ನೀವು ತೋರಿಸುವ ಹಿನ್ನೆಲೆಯ ಕತೆ. ಇವೆಲ್ಲವೂ ಕೌಟುಂಬಿಕ ಅನುಭವವನ್ನು ನೀಡುತ್ತವೆ. ಆತ ಯಾಕೆ ಹಾಗೆ ಮಾಡುತ್ತಿದ್ದಾನೆ, ಏಕೆ ಹಾಗೆ ಮಾಡುತ್ತಿದ್ದಾನೆ, ನಂತರದ ತಿರುವುಗಳು ಮತ್ತು ಗೆಳೆತನ. ಕೊನೆಗಿದು ತಾರ್ಕಿಕ ಅಂತ್ಯ ತಲುಪಿ, ಇತರರು ತಿರುಗಿ ಬಿದ್ದರೂ ಆತ ತನ್ನ ಸ್ನೇಹಿತನನ್ನು ಕೊಲ್ಲಲಾಗದ ಸ್ಥಿತಿಗೆ ತಲುಪುವುದು.. ಇವೆಲ್ಲವೂ ಬಹಳ ಬಹಳ ಶಕ್ತಿಶಾಲಿಯಾಗಿ ಮೂಡಿ ಬಂದಿವೆ" ಎಂದು ಶ್ಲಾಘಿಸಿದ್ದಾರೆ.

ಅದಕ್ಕೆ ಪ್ರತಿಯಾಗಿ, "ನಿಮ್ಮ ಈ ಮಾತುಗಳು ನನಗೆ ಪ್ತಶಸ್ತಿಗಿಂತ ಹೆಚ್ಚು" ಎಂದು ಎಸ್‌.ಎಸ್.ರಾಜಮೌಳಿ ಕೃತಜ್ಞತೆ ಸಲ್ಲಿಸಿದ್ದಾರೆ.

"ನಾಟು ನಾಟು" ಗೀತೆಗಾಗಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಗೆ ಭಾಜನರಾಗಿರುವ ಎಂ.ಎಂ.ಕೀರವಾಣಿಯವರನ್ನೂ ಗುರುತು ಹಚ್ಚಿದ ಅವರು, "ನೀವು ಸಂಗೀತ ಸಂಯೋಜಿಸಿದ್ದಲ್ಲವೆ? ಯಾಕೆಂದರೆ ನಾನು ನಿಮ್ಮನ್ನು ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭದಲ್ಲಿ ಕಂಡಿದ್ದೆ. ಸಂಗೀತ ಸಂಯೋಜನೆ ವಿಸ್ಮಯಕಾರಿಯಾಗಿದೆ. ಸನ್ನಿವೇಶಕ್ಕೆ ಹೊರತಾಗಿದ್ದು ಮತ್ತು ಸನ್ನಿವೇಶದ ಬೆಂಬಲಕ್ಕೆ ನಿಲ್ಲುವ ನಿಮ್ಮ ಸಂಗೀತ ನನಗೆ ಮೆಚ್ಚುಗೆಯಾಗಿದ್ದು, ಆ ಹೊತ್ತಿಗೆ ಸಂಗೀತವು ತನ್ನದೇ ಲಯವನ್ನು ಸೃಷ್ಟಿಸಿರುತ್ತಾದ್ದರಿಂದ ಪ್ರೇಕ್ಷಕರು ಅದಾಗಲೇ ವಿಶಿಷ್ಟ ಅನುಭೂತಿಗೊಳಗಾಗಿರುತ್ತಾರೆ. ಆದರೆ, ನೀವು ಸಂಗೀತವನ್ನು ವಿಭಿನ್ನವಾಗಿ ಬಳಸಿದ್ದೀರಿ" ಎಂದು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಕಿರುಕುಳ ಆರೋಪ ನಾಟಕ ಎಂದ ಬಿಜೆಪಿಗೆ ತಿರುಗೇಟು ನೀಡಿದ ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್

Similar News