ತಮ್ಮಲ್ಲಿ ಪ್ರಕಟವಾಗುವ ಸುದ್ದಿ ತುಣುಕುಗಳಿಗೆ ತಂತ್ರಜ್ಞಾನ ಸಂಸ್ಥೆಗಳು ಹಣ ಪಾವತಿಸಬೇಕು: ಕೇಂದ್ರ ಸರ್ಕಾರ
ಹೊಸ ದಿಲ್ಲಿ: ದೈತ್ಯ ತಂತ್ರಜ್ಣಾನ ಸಂಸ್ಥೆಗಳು ತಮ್ಮ ವೇದಿಕೆಗಳಲ್ಲಿ ಪ್ರಕಟವಾಗುವ ಪತ್ರಿಕಾ ಸುದ್ದಿ ಪ್ರಕಾಶಕರ ಡಿಜಿಟಲ್ ಆವೃತ್ತಿ ಸುದ್ದಿಯ ತುಣುಕುಗಳಿಗೆ ತಮ್ಮ ಆದಾಯದಲ್ಲಿ ನ್ಯಾಯೋಚಿತ ಪಾಲನ್ನು ನೀಡಬೇಕು ಎಂದು ಶುಕ್ರವಾರ ಸೂಚಿಸಿರುವ ಕೇಂದ್ರ ಸರ್ಕಾರ, ಈ ವಲಯದಲ್ಲಿನ ಅಸಮಾನ ಪ್ರಮಾಣದ ಅಸಮತೋಲನವನ್ನು ನಿವಾರಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದೆ ಎಂದು indianexpress.com ವರದಿ ಮಾಡಿದೆ.
ಡಿಜಿಟಲ್ ಸುದ್ದಿ ಪ್ರಕಾಶಕರ ಒಕ್ಕೂಟವು ಏರ್ಪಡಿಸಿದ್ದ ಒಂದು ದಿನದ ಸಮಾಲೋಚನಾ ಸಭೆಯ ಉದ್ಘಾಟನಾ ಅವಧಿಗಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ತಾವು ರವಾನಿಸಿದ್ದ ಸಂದೇಶದಲ್ಲಿ ಈ ಕ್ರಮವನ್ನು "ಪತ್ರಿಕೋದ್ಯಮದ ಭವಿಷ್ಯ" ಎಂದು ಬಣ್ಣಿಸಿದ್ದಾರೆ. ಈ ಸಂದೇಶವನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ವಾಚಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಈ ಸಂಗತಿಯನ್ನು ದೃಢಪಡಿಸಿದ್ದಾರೆ.
ಡಿಜಿಟಲ್ ಸುದ್ದಿ ಉದ್ಯಮ ಮಾತ್ರವಲ್ಲದೆ ಅದರ ಮಾತೃ ಸಂಸ್ಥೆಗಳಾದ ಮುದ್ರಣ ಮಾಧ್ಯಮ ಉದ್ಯಮಗಳು ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನ ಕುರಿತು ಪ್ರಸ್ತಾಪಿಸಿದ ಅಪೂರ್ವ ಚಂದ್ರ, "ಸುದ್ದಿ ಉದ್ಯಮದ ಬೆಳೆವಣಿಗಾಗಿ, ಅಸಲಿ ಸುದ್ದಿ ತುಣುಕಿನ ನಿಜವಾದ ಮಾಲಕರಾದ ಡಿಜಿಟಲ್ ಸುದ್ದಿ ವೇದಿಕೆಗಳ ಮಾತೃ ಸಂಸ್ಥೆಗಳಿಗೆ ಇತರರು ಸೃಷ್ಟಿಸುವ ಸುದ್ದಿ ತುಣುಕುಗಳನ್ನು ಸಂಗ್ರಹಿಸುವ ಕೆಲಸ ಮಾತ್ರ ಮಾಡುವ ದೈತ್ಯ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಆದಾಯದಲ್ಲಿ ನ್ಯಾಯೋಚಿತ ಪಾಲು ಹಂಚಿಕೊಳ್ಳುವುದು ಮುಖ್ಯವಾಗಿದೆ" ಎಂದು ಹೇಳಿದ್ದಾರೆ.
"ಸಾಂಪ್ರದಾಯಿಕ ಸುದ್ದಿ ಉದ್ಯಮಗಳು ಹಾನಿ ಅನುಭವಿಸುವುದು ಮುಂದುವರಿದರೆ ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವೂ ಹಾನಿಯಾಗುತ್ತದೆ. ಹೀಗಾಗಿ ಇದು ಪತ್ರಿಕೋದ್ಯಮ ಹಾಗೂ ವಿಶ್ವಾಸಾರ್ಹ ಸುದ್ದಿಗಳ ಪ್ರಶ್ನೆಯಾಗಿದೆ" ಎಂದು ಅಪೂರ್ವ ಚಂದ್ರ ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಯೂರೋಪ್ ದೇಶಗಳು ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು, ಶಾಸನಗಳನ್ನೂ ಜಾರಿ ಮಾಡುವ ಮೂಲಕ ಸುದ್ದಿಯ ಮಾಲಕರು ಹಾಗೂ ಸಂಗ್ರಹಕಾರರ ನಡುವೆ ಆದಾಯದ ನ್ಯಾಯೋಚಿತ ಹಂಚಿಕೆಯನ್ನು ಖಾತ್ರಿಗೊಳಿಸಲು ತಮ್ಮ ದೇಶಗಳ ಸ್ಪರ್ಧಾ ಆಯೋಗಗಳನ್ನು ಬಲಿಷ್ಢಗೊಳಿಸಿವೆ.
ಡಿಜಿಟಲ್ ಸುದ್ದಿ ಪ್ರಕಾಶಕರ ಒಕ್ಕೂಟವು ಇಂಡಿಯನ್ ಎಕ್ಸ್‌ಪ್ರೆಸ್ ಸೇರಿದಂತೆ 17 ಮುಂಚೂಣಿ ಸುದ್ದಿ ಪ್ರಕಾಶಕ ಸಂಸ್ಥೆಗಳು ಒಟ್ಟುಗೂಡಿ ರಚಿಸಿಕೊಂಡಿರುವ ಸಂಘಟನೆಯಾಗಿದೆ.