ನೇತಾಜಿಯ ಪರಂಪರೆಯನ್ನು ಬಳಸಿಕೊಳ್ಳಲಿಕ್ಕಾಗಿ ಅವರ ಜನ್ಮದಿನವನ್ನು ಆಚರಿಸಲು ಆರೆಸ್ಸೆಸ್ ಯೋಜಿಸುತ್ತಿದೆ: ಪುತ್ರಿ

"ಆರೆಸ್ಸೆಸ್‌ ಸಿದ್ಧಾಂತಕ್ಕೂ ನೇತಾಜಿ ಚಿಂತನೆಗೂ ಅಜಗಜಾಂತರವಿದೆ"

Update: 2023-01-21 15:19 GMT

ಕೊಲ್ಕತ್ತಾ: ಜನವರಿ 23 ರಂದು ನೇತಾಜಿ ಸುಭಾಸ್‌ ಚಂದ್ರ ಬೋಸ್‌ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಆರೆಸ್ಸೆಸ್‌ ಸಿದ್ಧತೆ ನಡೆಸಿರುವ ನಡುವೆ  ನೇತಾಜಿ ಅವರ ಪುತ್ರಿ ಅನಿತಾ ಬೋಸ್-ಪ್ಫಾಫ್‌ ಪ್ರತಿಕ್ರಿಯಿಸಿ, ತಮ್ಮ ತಂದೆಯ ಹೆಸರಿನಿಂದ ಭಾಗಶಃ ಪ್ರಯೋಜನ ಪಡೆಯುವ ಉದ್ದೇಶದಿಂದ ಇದನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

"ಆರೆಸ್ಸೆಸ್‌ ಸಿದ್ಧಾಂತ ಮತ್ತು ರಾಷ್ಟ್ರೀಯವಾದಿ ನಾಯಕರಾಗಿದ್ದ ಬೋಸ್‌ ಅವರು ಜಾತ್ಯತೀತತೆ ಮತ್ತು ಸೇರ್ಪಡೆ ಕುರಿತು ಹೊಂದಿದ್ದ ಚಿಂತನೆಗಳ ನಡುವೆ ಅಜಗಜಾಂತರ ವ್ಯತ್ಯಾಸವಿದೆ," ಎಂದು ಅನಿತಾ ಬೋಸ್‌ ಹೇಳಿದ್ದಾರೆ.

"ಸಿದ್ಧಾಂತದ ವಿಚಾರ ಬಂದಾಗ, ಭಾರತದಲ್ಲಿ ಇತರ ಯಾವುದೇ ಪಕ್ಷಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ ಪಕ್ಷದ ಸಿದ್ಧಾಂತವು ನೇತಾಜಿ ಸಿದ್ಧಾಂತಕ್ಕೆ ಹತ್ತಿರವಾಗಿದೆ," ಎಂದು ಅರು ಹೇಳಿದ್ದಾರೆ.

"ನೇತಾಜಿ ಅವರ ಚಿಂತನೆಯಂತೆ ಎಲ್ಲಾ ಧರ್ಮಗಳನ್ನು ಗೌರವಿಸುವ ಪರಿಕಲ್ಪನೆಯನ್ನು ಬಿಜೆಪಿ ಮತ್ತು ಆರೆಸ್ಸೆಸ್‌ ಪ್ರತಿಫಲಿಸುವುದಿಲ್ಲ.  ಹಿಂದುವಾಗಿದ್ದರೂ ಇತರ ಧರ್ಮಗಳನ್ನು ಗೌರವಿಸುವುದರ ಮೇಲೆ ನೇತಾಜಿ ನಂಬಿಕೆಯಿರಿಸಿದ್ದರು. ಆರೆಸ್ಸೆಸ್‌ ಮತ್ತು ಬಿಜೆಪಿ ಈ ಧೋರಣೆಯನ್ನು ಬಿಂಬಿಸುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಅವರು ಬಲಪಂಥಿಯರು ಹಾಗೂ ನೇತಾಜಿ ಎಡಪಂಥಿಯರು," ಎಂದು ಜರ್ಮನಿಯಿಂದ ಮಾಧ್ಯಮ ಸಂಸ್ಥೆಯೊಂದಕ್ಕೆ ಅನಿತಾ ಬೋಸ್‌ ಪ್ರತಿಕ್ರಿಯಿಸಿದ್ದಾರೆ.

ಅದೇ ಸಮಯ ನೇತಾಜಿ ಅವರನ್ನು ಗೌರವಿಸಲು ಕೇಂದ್ರ ಸರ್ಕಾರ ಕೈಗೊಂಡ ಹಲವು ಕಾರ್ಯಕ್ರಮಗಳನ್ನು ಅವರು ಶ್ಲಾಘಿಸಿದ್ದಾರೆ.

ನೇತಾಜಿ ಜಯಂತಿ ಅಂಗವಾಗಿ ಜನವರಿ 23 ರಂದು ಕೊಲ್ಕತ್ತಾದ ಶಾಹಿದ್‌ ಮಿನಾರ್‌ ಮೈದಾನದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ಮಾತನಾಡಲಿದ್ದಾರೆ.

Similar News