​ಉಚ್ಚಿಲ ದೇವಸ್ಥಾನದಲ್ಲಿ ಫೆ.11ಕ್ಕೆ ಜಿಲ್ಲಾ ರೈತ ಸಮ್ಮೇಳನ

Update: 2023-01-21 14:07 GMT

ಉಡುಪಿ: ಪ್ರತೀ ಮೂರು ವರ್ಷಗಳಿಗೊಮ್ಮೆ ಜಿಲ್ಲೆಯ ರೈತರನ್ನು ಸಂಘಟಿಸಿ ಜಿಲ್ಲಾ ಭಾರತೀಯ ಕಿಸಾನ್ ಸಂಘ ನಡೆಸುವ  ಉಡುಪಿ ಜಿಲ್ಲಾ ರೈತ ಸಮ್ಮೇಳನವನ್ನು ಈ ಬಾರಿ ಉಚ್ಚಿಲದ ಶ್ರೀ ಮಹಾಕ್ಷ್ಮೀ ದೇವಸ್ಥಾನದ ಸಭಾಂಗಣದಲ್ಲಿ ಮುಂದಿನ ಫೆಬ್ರವರಿ 11ರ ಶನಿವಾರದಂದು ಆಯೋಜಿಸ ಲಾಗುವುದು ಎಂದು ಭಾಕಿಸಂನ ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಪ್ರಕಟಿಸಿದ್ದಾರೆ.

ಜಿಲ್ಲಾ ಭಾಕಿಸಂ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.ಜಿಲ್ಲೆಯಲ್ಲಿ ಭಾರತೀಯ ಕಿಸಾನ್ ಸಂಘದ ಚಟುವಟಿಕೆ ಪ್ರಾರಂಭವಾಗಿ 25 ವರ್ಷಗಳು ಪೂರ್ಣಗೊಂಡಿವೆ. ಈ ಅವಧಿಯಲ್ಲಿ ಜಿಲ್ಲೆಯ ರೈತರನ್ನು ಸಂಘಟಿಸಿ, ಅನೇಕ ಕಾರ್ಯಕ್ರಮ ಗಳನ್ನು, ಹೋರಾಟಗಳನ್ನು ಹಾಗೂ ಕಾರ್ಯಾಗಾರಗಳನ್ನು ಆಯೋಜಿಸಲಾ ಗಿದೆ.  ರೈತ ಪರವಾಗಿ ಕೆಲಸ ಮಾಡಿದ್ದೇವೆ ಎಂದವರು ಹೇಳಿದರು.

ಜಿಲ್ಲೆಯನ್ನು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ನಗರ ಫೀಡರ್ ಆಗಿ ಪರಿವರ್ತನೆ ಸೇರಿದಂತೆ ಗುಣಮಟ್ಟದಲ್ಲಿ ಸುಧಾರಣೆ, ಕಾಡುಪ್ರಾಣಿಗಳ ಸಮಸ್ಯೆಗೆ ಸಂಘಟಿತ ಹೋರಾಟ, ತೆಂಗಿನ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ಕಂಪನಿಗಳ ರಚನೆ, ರೈತರಿಗೆ ದಾನಿಗಳ ಸಹಕಾರದಿಂದ ಗೋಬರ್ ಗ್ಯಾಸ್ ಘಟಕ ಅಳವಡಿಕೆ, ಸಾವಯವ ಕೃಷಿಗೆ ಉತ್ತೇಜನ ನೀಡುವ ಸರಕಾರದ ಯೋಜನೆಗಳ ಅನುಷ್ಠಾನ ಮೊದಲಾದ ಕಾರ್ಯಕ್ರಮಗಳ ಮೂಲಕ ಪ್ರತೀ ರೈತರ ಸಂಕಷ್ಟಕ್ಕೆ ಸಂಘಟನೆ ನಿಂತಿದೆ ಎಂದವರು ವಿವರಿಸಿದರು.

ಈ ಎಲ್ಲಾ ಅಂಶಗಳನ್ನು ಮುಂದಿಟ್ಟು ರೈತರನ್ನು ಸಂಘಟಿಸಿ, ತಜ್ಞರಿಂದ ಮಾಹಿತಿ ಕಾರ್ಯಾಗಾರ ಹಾಗೂ ವಸ್ತು ಪ್ರದರ್ಶನಗಳನ್ನು ಹಾಕಿಕೊಂಡು ಈ ಜಿಲ್ಲಾ ರೈತ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ. ಕೃಷಿ ಕ್ಷೇತ್ರದ ಸಾಧಕರು, ತಜ್ಞರು, ಅಧಿಕಾರಿಗಳನ್ನು ಸೇರಿಸಿ ಒಂದು ದಿನದ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತದೆ. ಎರಡರಿಂದ ಮೂರು ಸಾವಿರಕ್ಕೂ ಹೆಚ್ಚು ರೈತರನ್ನು ಸಂಘಟಿಸುವ ಬಗ್ಗೆ ಸಂಘ ಕಾರ್ಯೋನ್ಮುಖವಾಗಿದೆ ಎಂದು ನವೀನ್‌ಚಂದ್ರ ಜೈನ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಶ್ರೀನಿವಾಸ ಭಟ್ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಸ್ವಾಗತಿಸಿ ವಿಷಯ ಮಂಡನೆ ಮಾಡಿದರು.

ಜಿಲ್ಲಾ ಸಮಿತಿಯ ಪದಾಧಿಕಾರಿಗಳಾದ ಸೀತಾರಾಮ ಗಾಣಿಗ, ಸುಂದರ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಆಸ್ತೀಕ ಶಾಸ್ತ್ರಿ, ಕೆ.ಪಿ ಭಂಡಾರಿ, ಸಂತೋಷ ಶೆಟ್ಟಿ, ದೀಪಕ್ ಪೈ, ಮೋಹನದಾಸ ಅಡ್ಯಂತಾಯ, ಪ್ರಶಾಂತ್ ಕುಮಾರ್, ಮಹಾಬಲ ಸುವರ್ಣ, ಕರುಣಾಕರ ಶೆಟ್ಟಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಚಿ

Similar News