×
Ad

ಬಾಂಬ್ ಬೆದರಿಕೆ ಬಳಿಕ ಉಝ್ಬೆಕಿಸ್ತಾನಕ್ಕೆ ತೆರಳಿದ ಮಾಸ್ಕೋ-ಗೋವಾ ವಿಮಾನ

Update: 2023-01-21 20:56 IST

ಪಣಜಿ,ಜ.21: ರಶ್ಯದ ರಾಜಧಾನಿ ಮಾಸ್ಕೋದಿಂದ ಗೋವಾಕ್ಕೆ ಆಗಮಿಸುತ್ತಿದ್ದ ಚಾರ್ಟರ್ಡ್ ವಿಮಾನವು ಶನಿವಾರ ನಸುಕಿನಲ್ಲಿ ಬಾಂಬ್ ಬೆದರಿಕೆಯ ಬಳಿಕ ದಿಕ್ಕು ಬದಲಿಸಿ ಉಝ್ಬೆಕಿಸ್ತಾನಕ್ಕೆ ತೆರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಮಾನವು ನಸುಕಿನ 4:15ಕ್ಕೆ ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ನೀಡಿದರು.

ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆಯಿದ್ದ ಇ-ಮೇಲ್ ಅನ್ನು ನಸುಕಿನ 12:30ಕ್ಕೆ ದಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರು ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅಝುರ್ ಏರ್ ನಿರ್ವಹಿಸುತ್ತಿದ್ದ ಎಝಡ್ವಿ2463 ಯಾನದ ಪಥವನ್ನು ಅದು ಭಾರತದ ವಾಯು ಪ್ರದೇಶವನ್ನು ಪ್ರವೇಶಿಸುವ ಮುನ್ನವೇ ಬದಲಿಸಲಾಯಿತು ಎಂದರು.

ಎರಡು ವಾರಗಳ ಹಿಂದಷ್ಟೇ ಮಾಸ್ಕೋದಿಂದ ಗೋವಾಕ್ಕೆ ಆಗಮಿಸುತ್ತಿದ್ದ ವಿಮಾನವು ಬಾಂಬ್ ಬೆದರಿಕೆಯಿಂದಾಗಿ ಗುಜರಾತಿನ ಜಾಮನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.

Similar News