ಬಿಜೆಪಿ ಸಂಸದ ಬೃಜ್‌ಭೂಷಣ್ ಶರಣ್ ಸಿಂಗ್ ರನ್ನು ಬೆಂಬಲಿಸಿದ್ದ ಕುಸ್ತಿ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ವಜಾ

Update: 2023-01-22 02:20 GMT

ಹೊಸದಿಲ್ಲಿ: ವಿವಾದದ ಕೇಂದ್ರ ಬಿಂದುವಾಗಿರುವ ಭಾರತದ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಅಧ್ಯಕ್ಷ ಬೃಜ್‌ಭೂಷಣ್ ಶರಣ್ ಸಿಂಗ್ ಅವರನ್ನು ಬೆಂಬಲಿಸಿದ ಆರೋಪದಲ್ಲಿ ಸಂಸ್ಥೆಯ ಸಹಾಯಕ ಕಾರ್ಯದರ್ಶಿ ವಿನೋದ್ ಥೋಮರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಜಾ ಮಾಡಿದ್ದಾರೆ.

ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಆರು ಬಾರಿಯ ಬಿಜೆಪಿ ಸಂಸದ ಸಿಂಗ್ ಅವರನ್ನು ಪದತ್ಯಾಗಕ್ಕೆ ಸೂಚಿಸಲಾಗಿತ್ತು. ಈ ನಿರ್ಧಾರದ ಬೆನ್ನಲ್ಲೇ ಗೋಂಡಾದಲ್ಲಿ ಥೋಮರ್, ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಬೆಂಬಲಿಸಿ ಸಾರ್ವಜನಿಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಗೋಂಡಾದಲ್ಲಿ ನಡೆಯುತ್ತಿರುವ ಹಿರಿಯರ ರಾಷ್ಟ್ರೀಯ ಮುಕ್ತ ರ‍್ಯಾಂಕಿಂಗ್ ಕುಸ್ತಿ ಚಾಂಪಿಯನ್‌ಶಿಪ್ ಅನ್ನು ಕೂಡಾ ತಕ್ಷಣದಿಂದ ರದ್ದು ಮಾಡಿರುವುದಾಗಿ ಠಾಕೂರ್ ಘೋಷಿಸಿದ್ದಾರೆ. ಟೂರ್ನಿಯಲ್ಲಿ ಸಿಂಗ್ ಅತಿಥಿಯಾಗಿ ಭಾಗವಹಿಸಿದ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ಬೆನ್ನಲ್ಲೇ ಈ ಕ್ರಮ ಕೈಗೊಂಡಿದ್ದಾರೆ. ಗೋಂಡಾದ ನಂದಿನಿನಗರ ಕ್ರೀಡಾಂಗಣದಲ್ಲಿ ಆರಂಭವಾದ ಟೂರ್ನಿಯಲ್ಲಿ ಸಿಂಗ್ ಭಾಗವಹಿಸಿದ್ದರು; ಆದರೆ ಯಾವುದೇ ಹೇಳಿಕೆ ನೀಡಿರಲಿಲ್ಲ.

ಜಂತರ್ ಮಂತರ್‌ನಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಯನ್ನು ಕ್ರೀಡಾಸಚಿವರ ಭರವಸೆ ಹಿನ್ನೆಲೆಯಲ್ಲಿ ಕೈಬಿಟ್ಟ ಬೆನ್ನಲ್ಲೇ ಸಿಂಗ್ ಅತಿಥಿಯಾಗಿ ಟೂರ್ನಿಯಲ್ಲಿ ಭಾಗವಹಿಸಿದ್ದು, ಕುಸ್ತಿಪಟುಗಳನ್ನು ಕೆರಳಿಸಿತ್ತು. ಸಿಂಗ್ ವಿರುದ್ಧದ ತನಿಖೆ ಪೂರ್ಣಗೊಳ್ಳುವವರೆಗೆ ಡಬ್ಲ್ಯುಎಫ್‌ಐ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಸಿಂಗ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕ್ರೀಡಾ ಸಚಿವರು ಭರವಸೆ ನೀಡಿದ್ದರು.

Similar News