ಉಡುಪಿ ಜಿಲ್ಲೆಯ ಗತವೈಭವ ಮುಂದಿನ ಪೀಳಿಗೆಗೆ ಉಳಿಸುವ ಪ್ರಯತ್ನ ನಡೆಯಲಿ: ಡಿ.ವಿ.ಸದಾನಂದ ಗೌಡ

Update: 2023-01-22 10:14 GMT

ಕಾಪು: ಉಡುಪಿ ಜಿಲ್ಲೆಯ ಇತಿಹಾಸ, ಸಂಸ್ಕೃತಿ, ಸಂಸ್ಕಾರ, ಗತವೈಭವವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಪ್ರಯತ್ನ ನಡೆಯಬೇಕಿದೆ ಎಂದು ಸಂಸದ ಡಿ.ವಿ. ಸದಾನಂದ ಗೌಡ ಅಭಿಪ್ರಾಯಪಟ್ಟಿದ್ದಾರೆ.

ಅವರು ಶನಿವಾರ ಉಡುಪಿ ಜಿಲ್ಲೆಯು 25ನೇ ವರ್ಷ ಪೂರೈಸುತ್ತಿರುವ ಪ್ರಯುಕ್ತ ಕಾಪು ಕಡಲ ಕಿನಾರೆಯಲ್ಲಿ ಹಮ್ಮಿಕೊಂಡಿರುವ ರಜತ ಮಹೋತ್ಸವ -2023 ಸಮಾರಂಭವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಮಾತನಾಡಿ, ಜಿಲ್ಲೆಯನ್ನು ಕಟ್ಟಿ ಬೆಳೆಸುವುದು. ಅಭಿವೃದ್ಧಿಯ ಚಿಂತನೆಯು ಕೇವಲ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳ ಜವಾಬ್ದಾರಿ ಮಾತ್ರವಲ್ಲ. ಇದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವೂ ಆಗಿದೆ. ಐತಿಹಾಸಿಕ ಕಾಪು ಬೀಚ್‌ನಲ್ಲಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ರಜತ ಮಹೋತ್ಸವ ಕಾರ್ಯಕ್ರಮವು ವಿಶೇಷವಾಗಿ ಮೂಡಿ ಬಂದಿದ್ದು, ಈ ಮೂಲಕ ಜಿಲ್ಲೆಯ ಜನತೆಗೆ ಇಲ್ಲಿನ ವೈಭವವನ್ನು ಪರಿಚಯಿಸುವ ಪ್ರಯತ್ನ ನಡೆದಿದೆ ಎಂದರು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಉಡುಪಿ ಜಿಲ್ಲೆಯಾಗಿ ರಚನೆಗೊಂಡ ಬಳಿಕ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಸಹಕಾರಿಯಾಗಿದೆ. ಯೋಚನೆಗಳು ಬಂದಾಗ ಮಾತ್ರ ಯೋಜನೆಗಳು ಬರಲು ಸಾಧ್ಯ. ಜಿಲ್ಲೆಯ ಅಭಿವೃದ್ಧಿಗೆ ಜನರಿಂದಲೂ ಸಹಕಾರ, ಸಲಹೆ, ಸೂಚನೆಗಳು ಅತ್ಯಗತ್ಯವಾಗಿ ದೊರಕಬೇಕಿದೆ ಎಂದರು. ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಪ್ರಸ್ತಾವನೆಗೈದು ಮಾತನಾಡಿ, ಉಡುಪಿ ಜಿಲ್ಲೆಯ ರಜತ ಮಹೋತ್ಸವವನ್ನು ಮಾದರಿಯಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪ್ರವಾಸಿ ಕ್ಷೇತ್ರಗಳನ್ನು ಪರಿಚಯಿಸುವ ಉದ್ದೇಶದೊಂದಿಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನೊಳಗೊಂಡು ಪ್ರವಾಸಿ ರಥ ಓಡಾಟಕ್ಕೆ ಸಿದ್ಧತೆ ನಡೆಸಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹೆಜಮಾಡಿ ಮೀನುಗಾರಿಕಾ ಬಂದರು, ಕುಡಿಯುವ ನೀರು ಸಹಿತ ಹಲವು ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ನಡೆದಿದೆ. ಈಗಾಗಲೇ ಪ್ರವಾಸಿಗರನ್ನು ಸೆಳೆಯುವ, ಶೈಕ್ಷಣಿಕವಾಗಿ ಹಲವು ಯೋಜನೆಗಳು ಕಾರ್ಯಗತಗೊಂಡಿದೆ. ಕೈಗಾರಿಕೆಗಳು ಬೆಳೆಯುವ ಮೂಲಕ ಕಾಪು ಹಲವು ವೈಶಿಷ್ಟ್ಯಗಳಿಂದ ಅಭಿವೃದ್ಧಿ ಹೊಂದುತ್ತಿದೆ ಎಂದರು.

 ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್., ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ ಮೊದಲಾದವರು ಉಪಸ್ಥಿತರಿದ್ದರು.

ಕಾಪುವಿನಲ್ಲಿ ಸೇವೆ ಸಲ್ಲಿಸಿದ ವಿವಿಧ ಅಧಿಕಾರಿಗಳನ್ನು, ಶಾಸಕ ಲಾಲಾಜಿ ಆರ್.ಮೆಂಡನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ಜಿಲ್ಲಾಧಿಕಾರಿ ಕೂರ್ಮಾ ರಾವ್ ಪ್ರಸ್ತಾವನೆಗೈದರು. ಶಶಿಧರ್ ಕೆ.ಜಿ. ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.

ವೈಭವದ ಶೋಭಾಯಾತ್ರೆ: ಕಾರ್ಯಕ್ರಮದ ಆರಂಭದಲ್ಲಿ ವೈಭವದ ಶೋಭಾಯಾತ್ರೆ ನಡೆಯಿತು.

Similar News