​ಉತ್ತರಾಖಂಡ: ದಲಿತರಿಗೆ ಪ್ರವೇಶ ನಿರಾಕರಿಸುವ ದೇಗುಲಗಳ ಪಟ್ಟಿ ತಯಾರಿಸಲು ಮುಂದಾದ ಸರ್ಕಾರ

Update: 2023-01-23 02:58 GMT

ಡೆಹ್ರಾಡೂನ್: ಉತ್ತರಾಖಂಡದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ, ರಾಜ್ಯದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸುವ ಎಲ್ಲ ದೇಗುಲಗಳ ಮತ್ತು ಇತರ ಧಾರ್ಮಿಕ ಸ್ಥಳಗಳ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ.
ಉತ್ತರಕಾಶಿಯ ಮೊರಿ ಪ್ರದೇಶದಲ್ಲಿ ಜನವರಿ 9ರಂದು ದೇವಾಲಯ ಪ್ರವೇಶಿಸಿದ ಕಾರಣಕ್ಕಾಗಿ 22 ವರ್ಷ ವಯಸ್ಸಿನ ದಲಿತ ಯುವಕನಿಗೆ ಸುಡುವ ಕೊಳ್ಳಿಯಿಂದ ಚಿತ್ರಹಿಂಸೆ ನೀಡಿದ ಬೆನ್ನಲ್ಲೇ ಆಯೋಗ ಈ ಕ್ರಮಕ್ಕೆ ಮುಂದಾಗಿದೆ. ಸಂತ್ರಸ್ತ ಯುವಕನ ತಂದೆ ಜನವರಿ 11ರಂದು ನೀಡಿದ ದೂರಿನ ಹಿನ್ನೆಲೆಯಲ್ಲಿ ಮೇಲ್ವರ್ಗಕ್ಕೆ ಸೇರಿದ ಐದು ಮಂದಿಯನ್ನು ಬಂಧಿಸಲಾಗಿತ್ತು.

"ದಲಿತರಿಗೆ ಪ್ರವೇಶ ನಿಕಾರಿಸುವ ಧಾರ್ಮಿಕ ಮಂದಿರಗಳ ಪಟ್ಟಿ ಇದುವರೆಗೂ ನಮ್ಮ ಬಳಿ ಇಲ್ಲ. ಆಘಾತಕಾರಿ ಉತ್ತರಕಾಶಿ ಘಟನೆ ಹಿನ್ನೆಲೆಯಲ್ಲಿ ಇಂಥ ಪಟ್ಟಿ ಪಡೆಯಲು ನಾವು ಮುಂದಾಗಿದ್ದೇವೆ. ಈ ಪಟ್ಟಿ ಆಧಾರದಲ್ಲಿ ಸ್ಥಳೀಯ ಆಡಳಿತ, ಈ ತಾರತಮ್ಯ ನಿವಾರಿಸಲು ಪ್ರಯತ್ನಿಸಲಿದೆ. ಇದಕ್ಕೆ ಮಣಿಯದಿದ್ದರೆ, ಸೂಕ್ತ ಕಾನೂನುಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು" ಎಂದು ಆಯೋಗದ ಅಧ್ಯಕ್ಷ ಮುಕೇಶ್ ಕುಮಾರ್ ಹೇಳಿದರು.

ಇಂಥ ಘಟನೆಗಳ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಇಂಥ ಕಾನೂನು ಬಾಹಿರ ಕ್ರಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

"ಒಂದು ವೇಳೆ ಒಂದು ದೇಗುಲದ ಧಾರ್ಮಿಕ ಆಚರಣೆ ಹಿನ್ನೆಲೆಯಲ್ಲಿ ಎಲ್ಲ ಭಕ್ತರಿಗೆ ನಿರ್ಬಂಧ ವಿಧಿಸಿದರೆ ಅದು ಸ್ವೀಕಾರರ್ಹ. ಆದರೆ ಕೇವಲ ದಲಿತರಿಗೆ ಅಥವಾ ಕೆಳವರ್ಗದವರಿಗೆ ಅದನ್ನು ಅನ್ವಯಿಸಿದರೆ, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಹಾಗೂ ಅದನ್ನು ನಿಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ" ಎಂದು ವಿವರಿಸಿದರು.

Similar News