ಲಡಾಖ್‌ನಲ್ಲಿ ಎಲ್ಲವೂ ಸರಿಯಿಲ್ಲ: '3 Idiots' ಸಿನಿಮಾಗೆ ಪ್ರೇರಣೆಯಾಗಿದ್ದ ವ್ಯಕ್ತಿಯಿಂದ ಪ್ರಧಾನಿಗೆ ಪತ್ರ

Update: 2023-01-23 07:36 GMT

ಲೇಹ್: ಬಾಲಿವುಡ್‌ನ '3 ಈಡಿಯಟ್ಸ್' (3 Idiots) ಸಿನಿಮಾಗೆ ತಮ್ಮ ಜೀವನ ಕಥೆಯ ಮೂಲಕ ಪ್ರೇರಣೆಯಾಗಿದ್ದ, ಲಡಾಖ್‌ನ ಸಾಮಾಜಿಕ ಮಾಧ್ಯಮ ಸುಧಾರಕ ಸೋನಮ್ ವಾಂಗ್‌ಚುಕ್ (Sonam Wangchuk) ಅವರು ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದು, ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಹಿಮಗಡ್ಡೆಗಳು ಮೂರನೆ ಎರಡು ಭಾಗದಷ್ಟು ಅಳಿಯುತ್ತಿವೆ ಎಂದು ಅಧ್ಯಯನಗಳು ಸೂಚಿಸುತ್ತಿದ್ದು, ಲಡಾಖ್‌ನ ಸುರಕ್ಷತೆ ಮತ್ತು ರಕ್ಷಣೆಯನ್ನು ಖಾತ್ರಿಗೊಳಿಸುವಂತೆ ಆಗ್ರಹಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಈ ಕುರಿತು ರವಿವಾರ ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಸೋನಂ ವಾಂಗ್‌ಚುಕ್, ಒಂದು ವೇಳೆ ಅಜಾಗರೂಕತೆ ಮುಂದುವರಿದರೆ ಹಾಗೂ ಉದ್ಯಮಗಳಿಂದ ಲಡಾಖ್‌ಗೆ ರಕ್ಷಣೆ ಒದಗಿಸಲು ಹಿಂಜರಿದರೆ ಮಂಜುಗಡ್ಡೆಗಳು ತೀವ್ರ ಸ್ವರೂಪದಲ್ಲಿ ಅಳಿಯುತ್ತವೆ. ಆ ಮೂಲಕ ಭಾರತ ಹಾಗೂ ನೆರೆಯ ದೇಶಗಳಲ್ಲಿ ನೀರಿನ ಕೊರತೆ ಉದ್ಭವಿಸುತ್ತದೆ ಎಂದು ಒತ್ತಿ ಹೇಳಿದ್ದಾರೆ.

ಒಂದು ವೇಳೆ ಯಾವುದೇ ಕ್ರಮಗಳನ್ನು ಕೈಗೊಳ್ಳದಿದ್ದರೆ, ಉದ್ಯಮಗಳು, ಪ್ರವಾಸೋದ್ಯಮ ಮತ್ತು ವಾಣಿಜ್ಯ ಚಟುವಟಿಕೆಗಳು ಲಡಾಖ್‌ನಲ್ಲಿ ಬೆಳೆಯುತ್ತಲೇ ಹೋಗಿ, ಕೊನೆಗೆ ಅದನ್ನು ಮುಗಿಸುತ್ತವೆ. ಒಂದು ವೇಳೆ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಲೇಹ್-ಲಡಾಖ್ ಪ್ರದೇಶಗಳಲ್ಲಿ ಹಿಮಗಡ್ಡೆಗಳು ಮೂರನೆ ಎರಡು ಭಾಗದಷ್ಟು ಕರಗಿ ಹೋಗಲಿವೆ ಎಂದು ಕಾಶ್ಮೀರ ವಿಶ್ವವಿದ್ಯಾಲಯ ಹಾಗೂ ಇನ್ನಿತರ ಸಂಸ್ಥೆಗಳ ಅಧ್ಯಯನಗಳಿಂದ ದೃಢಪಟ್ಟಿದೆ. ಕಾಶ್ಮೀರ ವಿಶ್ವವಿದ್ಯಾಲಯ ಅಧ್ಯಯನದ ಪ್ರಕಾರ, ಹೆದ್ದಾರಿಗಳು ಹಿಮಗಡ್ಡೆಗಳಿಂದ ಆವೃತವಾಗುತ್ತಿವೆ ಮತ್ತು ಮಾನವ ಚಟುವಟಿಕೆಗಳಿಂದ ಈ ಹಿಂದಿಗಿಂತ ಹೆಚ್ಚು ವೇಗವಾಗಿ ಕರಗುತ್ತಿವೆ ಎಂದು ಹೇಳಲಾಗಿದೆ ಎಂದು ವಾಂಗ್‌ಚುಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸೋನಮ್ ವಾಂಗ್‌ಚುಕ್, "ಲಡಾಖ್‌ನಲ್ಲಿ ಎಲ್ಲವೂ ಸರಿಯಿಲ್ಲ! ನನ್ನ ಹೊಸ ವಿಡಿಯೊದಲ್ಲಿ ಪರಿಸರ ಸೂಕ್ಷ್ಮ ಲಡಾಖ್ ಅನ್ನು ರಕ್ಷಿಸುವಂತೆ ನರೇಂದ್ರ ಮೋದಿಯವರಿಗೆ ಮನವಿ ಮಾಡುತ್ತೇನೆ‌. ನಾನು ಸರ್ಕಾರ ಹಾಗೂ ಜಗತ್ತಿನ ಗಮನ ಸೆಳೆಯಲು 18000 ಅಡಿ ಆಳ ಹಾಗೂ -40 ಡಿಗ್ರಿ ಸೆಲ್ಷಿಯಸ್ ತಾಪಮಾನ ಹೊಂದಿರುವ ಖರ್ದುಂಗ್ಲಾ ಕಣಿವೆಯಲ್ಲಿ ಜನವರಿ 26ರಿಂದ ಐದು ದಿನಗಳ ಹವಾಮಾನ ಉಪವಾಸ ನಡೆಸಲಿದ್ದೇನೆ" ಎಂದು ಬರೆದುಕೊಂಡಿದ್ದಾರೆ.

ಖರ್ದುಂಗ್ಲಾ ಕಣಿವೆಯಲ್ಲಿ ಜನವರಿ 26ರಿಂದ ನಾನು ನಡೆಸಲಿರುವ ಐದು ದಿನಗಳ ಹವಾಮಾನ ಉಪವಾಸದ ಸಂದೇಶವು ಪ್ರಧಾನಿ ಮೋದಿ ಹಾಗೂ ಜನರನ್ನು ತಲುಪಲಿ ಎಂದು ಆಶಿಸುತ್ತೇನೆ ಎಂದು ANI ಸುದ್ದಿ ಸಂಸ್ಥೆಗೆ ಸೋನಂ ವಾಂಗ್‌ಚುಕ್ ತಿಳಿಸಿದ್ದಾರೆ.

ಇದನ್ನೂ ಓದಿ: ​ಉತ್ತರಾಖಂಡ: ದಲಿತರಿಗೆ ಪ್ರವೇಶ ನಿರಾಕರಿಸುವ ದೇಗುಲಗಳ ಪಟ್ಟಿ ತಯಾರಿಸಲು ಮುಂದಾದ ಸರ್ಕಾರ

Similar News