ಪ್ರಕಾಶ್ಚಂದ್ರ ಶೆಟ್ಟಿಗೆ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಪ್ರದಾನ

Update: 2023-01-23 13:33 GMT

ಕುಂದಾಪುರ: ಕನ್ನಡದಲ್ಲಿ ವಾದ, ಪ್ರತಿವಾದ ಹಾಗೂ ತೀರ್ಪುಗಳ ಮೇಲೆ ಅಭಿಪ್ರಾಯ ಮಂಡಿಸಿದ ಸರಕಾರಿ ಅಭಿಯೋಜಕ(ಪಬ್ಲಿಕ್ ಅಭಿ ಯೋಜಕರು)ರಿಗೆ ನೀಡಲಾಗುವ ‘ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿಯನ್ನು ಬೇಳೂರು ಪ್ರಕಾಶ್ಚಂದ್ರ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.

ಬೆಂಗಳೂರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರವಿವಾರ ಜರುಗಿದ 2019-20ನೆ ಹಾಗೂ 2020-21ನೆ ಸಾಲಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಜಿ. ನರೇಂದರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ನ್ಯಾಯಾ ಧೀಶರು, ಸರಕಾರಿ ಅಭಿಯೋಜಕರು ಹಾಗೂ ವಕೀಲರಿಗೆ ನೀಡುವ ’ನ್ಯಾಯಾಂಗದಲ್ಲಿ ಕನ್ನಡ’ ಪ್ರಶಸ್ತಿ ಕೋವಿಡ್ ಕಾರಣಕ್ಕಾಗಿ 2 ವರ್ಷದಿಂದ ನಡೆದಿರಲಿಲ್ಲ. ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು 2019-20ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾದವರಾಗಿದ್ದು ಆ ವೇಳೆ ಅವರು ಕುಂದಾಪುರದಲ್ಲಿರುವ ಜಿಲ್ಲಾ ಮತ್ತು ಹೆಚ್ಚುವರಿ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾಗಿದ್ದರು.

Similar News