ಕುಂದಾಪುರದಲ್ಲಿ ಹೆಚ್ಚುತ್ತಿರುವ ಚಿರತೆಗಳ ಓಡಾಟ: ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

Update: 2023-01-23 13:39 GMT

ಕುಂದಾಪುರ: ಇತ್ತೀಚಿನ ಕೆಲ ವರ್ಷಗಳಲ್ಲಿ ಕುಂದಾಪುರ ತಾಲೂಕಿನ ಹಲವೆಡೆ ಚಿರತೆಗಳ ಓಡಾಟ ಹೆಚ್ಚುತ್ತಿದೆ. ಇದೀಗ ಅವುಗಳು ಆಹಾರ ಅರಸಿಕೊಂಡು ಜನವಸತಿ ಪ್ರದೇಶಕ್ಕೂ ಹೆಜ್ಜೆ ಹಾಕುತ್ತಿದ್ದು, ಇದರಿಂದ ಗ್ರಾಮಸ್ಥರು  ತೀವ್ರ ಆತಂಕಕ್ಕೆ ಒಳಗಾಗುತ್ತಿದ್ದಾರೆ.

ಚಿರತೆಯು ಆಹಾರ ವರಸಿ ಜನವಸತಿ ಪ್ರದೇಶದತ್ತ ಬರುವುದು, ಸಾಕು ಪ್ರಾಣಿಗಳನ್ನು ಕೊಂಡೊಯ್ಯುವುದು, ಬಾವಿ-ಕೆರೆಗೆ ಬಿದ್ದು ತಮ್ಮ ಜೀವದೊಂದಿಗೆ ಸೆಣೆಸಾಡುವ ಜೊತೆಗೆ ಜನರ ಕಣ್ಣಿಗೆ ಕಾಣಿಸಿಕೊಂಡು ಆತಂಕ ಹುಟ್ಟಿಸುತ್ತಿದೆ. ಮನೆಯ ನಾಯಿ, ಜಾನುವಾರು ಸಹಿತ ಸಾಕು ಪ್ರಾಣಿಗಳು ಹಲವಾರು ಅಲ್ಲಲ್ಲಿ ಚಿರತೆ ದಾಳಿಗೆ ಬಲಿಯಾಗುತ್ತಿವೆ.

ಸಂಜೆ ಹಾಗೂ ರಾತ್ರಿ ಹೊತ್ತು ಕೆಲಸ ಮುಗಿಸಿ ಹೋಗುವ ಅದೆಷ್ಟೋ ಮಂದಿಗೆ ಚಿರತೆ ಪ್ರತ್ಯಕ್ಷವಾಗುತ್ತಿದೆ. ಚಿರತೆ ಓಡಾಟದಿಂದ ನಾಯಿಗಳು ಕೂಗಿ ರಾತ್ರಿಯಿಡೀ ನಿದ್ದೆ ಬಿಟ್ಟವರು ಹಲವರು. ಮತ್ತೆ ಕೆಲವೆಡೆ ಜನರು ಚಿರತೆ ಭೀತಿಯಿಂದ ಸಂಜೆ ಆಗುವ ಮೊದಲೆ ಮನೆ ಸೇರುತ್ತಿದ್ದಾರೆ.

ನಿರಂತರ ಚಿರತೆ ಕಾಟ: ತಾಲೂಕಿನ ತೆಕ್ಕಟ್ಟೆ ಸಮೀಪದ ಮಾಲಾಡಿ ತೋಪಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಹಗಲು-ರಾತ್ರಿಯೆನ್ನದೆ ಆಗ್ಗಾಗೆ ಪ್ರತ್ಯಕ್ಷವಾಗಿ ಜನರಲ್ಲಿ ಭೀತಿ ಸೃಷ್ಟಿಸುತ್ತಿದೆ.

ಕಳೆದ ಒಂದು ವಾರದಿಂದ ಹಲವು ಸಾಕು ನಾಯಿಗಳು ಚಿರತೆ ದಾಳಿಗೆ ಬಲಿಯಾಗಿವೆ. ಈ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಮೊದಲ್ಗೊಂಡು 2022 ಅ.2 ತನಕ ಆರು ಚಿರತೆಗಳು ಸೆರೆಯಾಗಿವೆ. ಈ ಭಾಗದಲ್ಲಿ ಜನವಸತಿ, ಶಾಲೆ, ಅಂಗನವಾಡಿ, ದೇವಸ್ಥಾನವಿದ್ದು ದಿನೇದಿನೇ ಚಿರತೆ ಇಲ್ಲಿ ಪ್ರತ್ಯಕ್ಷವಾಗುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಈ ಬಗ್ಗೆ ಸ್ಪಂದಿಸಿದ ಇಲಾಖೆ ಜ.20ರಂದು ಚಿರತೆ ಸೆರೆಗಾಗಿ ಬೋನಿಟ್ಟಿದೆ.

ಅದೇ ರೀತಿ ಕುಂದಾಪುರ ವಲಯ ಅರಣ್ಯ ವ್ಯಾಪ್ತಿಯ ನಾಡ, ಆಲೂರು, ಗುಲ್ವಾಡಿ, ವಕ್ವಾಡಿ, ಕಾಳಾವರ, ಕೊರ್ಗಿ, ಕೆದೂರು, ಅಸೋಡು, ಅಂಪಾರು, ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಕೆತ್ತಿಮಕ್ಕಿ, ತೆಕ್ಕಟ್ಟೆಯ ಮಾಲಾಡಿ, ಹಾಗೂ ಕುಂದಬಾರಂದಾಡಿ ಎಂಬಲ್ಲಿಯೂ ಚಿರತೆಗಳು ನಾಡಿಗೆ ಬರುತ್ತಿದ್ದು, ಸಾಕಷ್ಟು ಚಿರತೆಗಳನ್ನು ಇಲ್ಲಿ ಅರಣ್ಯ ಇಲಾಖೆಯವರು ರಕ್ಷಿಸಿದ್ದಾರೆ.

ಕಳೆದ 4-5 ವರ್ಷಗಳಿಂದ ನಿರಂತರವಾಗಿ ಚಿರತೆ ಕಾಟವಿದೆ. ರಾತ್ರಿ- ಹಗಲೆನ್ನದೆ ಪ್ರತ್ಯಕ್ಷವಾಗುವ ಚಿರತೆ ಜನರ ನಿದ್ದೆಗೆಡಿಸಿದೆ. ನಾಯಿ ಸಹಿತ ಸಾಕು ಪ್ರಾಣಿಗಳು ಚಿರತೆಗೆ ಬಲಿಯಾಗಿವೆ. ಅರಣ್ಯ ಇಲಾಖೆ ಚಿರತೆ ಸೆರೆಗೆ ಸ್ಪಂದಿಸುತ್ತಿದೆ. ಆದರೂ ಕೂಡ ಚಿರತೆ ಉಪಟಳ ತಪ್ಪಿಲ್ಲ. ಮಾಲಾಡಿ ತೋಪಿ ನಲ್ಲಿಯೇ 5 ವರ್ಷದಲ್ಲಿ 6 ಚಿರತೆ ಸೆರೆ ಹಿಡಿಯಲಾಗಿದೆ. 2022ರಲ್ಲಿ ಎರಡು ಚಿರತೆ ಬೋನಿಗೆ ಬಿದ್ದಿದೆ. ಗುರುವಾರ ರಾತ್ರಿ ತನಕವೂ ಚಿರತೆ ಕಾಟ ಹಾಗೆಯೇ ಇದೆ.
-ಸತೀಶ್ ದೇವಾಡಿಗ, ಮಾಲಾಡಿ ಗ್ರಾಮಸ್ಥರು

ಕುಂದಾಪುರ ವಲಯ ಅರಣ್ಯ ವ್ಯಾಪ್ತಿಯ ಹಲವಾರು ಕಡೆ ಚಿರತೆ ಓಡಾಟದ ಬಗ್ಗೆ ದೂರುಗಳು ಬರುತ್ತಿವೆ. ಗುಲ್ವಾಡಿ ಗ್ರಾಮದ ಮಾವಿನಕಟ್ಟೆ ಕೆತ್ತಿಮಕ್ಕಿ ಎಂಬಲ್ಲಿ  ವಾರಗಳ ಹಿಂದೆ ಅರಣ್ಯ ಇಲಾಖೆಯಿಟ್ಟ ಬೋನಿನಲ್ಲಿ ಗುರುವಾರ ಚಿರತೆ ಸೆರೆಯಾಗಿದೆ. ಉಳಿದಂತೆ 3 ತಿಂಗಳ ವ್ಯಾಪ್ತಿಯಲ್ಲಿ ತೆಕ್ಕಟ್ಟೆಯ ಮಾಲಾಡಿ, ಹಾಗೂ ಕುಂದಬಾರಂದಾಡಿ ಎಂಬಲ್ಲಿ ಚಿರತೆಯನ್ನು ಸೆರೆಹಿಡಿಯಲಾಗಿದೆ. ಸೆರೆಯಾದ ಚಿರತೆಗಳನ್ನು ರಕ್ಷಿತಾರಣ್ಯಕ್ಕೆ ಬಿಡುವ ಕಾರ್ಯ ಅರಣ್ಯ ಇಲಾಖೆ ಮಾಡುತ್ತಿದೆ. ಮಾಲಾಡಿಯಲ್ಲಿ ಮತ್ತೆ ಚಿರತೆ ಓಡಾಟದ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದು ಬೋನು ಇಡಲಾಗಿದೆ.
- ಕಿರಣ್ ಬಾಬು, ಕುಂದಾಪುರ ವಲಯ ಅರಣ್ಯಾಧಿಕಾರಿ

Similar News